ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬುಧವಾರ ಚಿನ್ನ ಮತ್ತು ಬೆಳ್ಳಿ ಬೆಲೆ ಭಾರೀ ಎತ್ತರಕ್ಕೆ ಜಿಗಿದಿದೆ. 910 ರೂ. ಹೆಚ್ಚಳವಾಗಿ 10 ಗ್ರಾಂ.ಗೆ 83,750 ರೂಪಾಯಿ ತಲುಪಿದೆ. ಜ್ಯುವೆಲರಿ ಮತ್ತು ಚಿಲ್ಲರೆ ಮಾರಾಟಗಾರರಿಂದ ಬೇಡಿಕೆ ಹೆಚ್ಚಾಗಿದ್ದು ಬೆಲೆ ಹೆಚ್ಚಳಕ್ಕೆ ಕಾರಣ ಎಂದು ಅಖಿಲ ಭಾರತ ಸರಾಫಾ ಅಸೋಸಿಯೇಷನ್ ತಿಳಿಸಿದೆ. ಇದಕ್ಕೂ ಹಿಂದಿನ ದಿನ ಅಂದರೆ ಮಂಗಳವಾರ 99.9 ಶುದ್ಧತೆಯ ಚಿನ್ನದ ದರ 10 ಗ್ರಾಂ.ಗೆ 82,840 ರೂ.ಗೆ ಮಾರಾಟವಾಗಿತ್ತು. ಜ.1ರಂದು ಚಿನ್ನದ ಬೆಲೆಯಲ್ಲಿ 4,360 ಅಥವಾ ಶೇಕಡ 5.5ರಷ್ಟು ಏರಿಕೆಯಾಗಿ 10 ಗ್ರಾಂ.ಗೆ 83,750 ಆಗಿತ್ತು. ಎರಡು ದಿನ ಕೊಂಚ ಇಳಿಕೆ ಕಂಡಿರುವ ಶೇಕಡ 99.5 ಶುದ್ಧತೆಯ ಚಿನ್ನ 910 ರೂಪಾಯಿ ಏರಿಕೆಯಾಗಿ 10 ಗ್ರಾಂ.ಗೆ 83,350 ತಲುಪಿದೆ. ಇದರ ಬೆಲೆ ಮಂಗಳವಾರ 82,440 ರೂಪಾಯಿ ಇತ್ತು. ಚಿನ್ನದೊಂದಿಗೆ ಬೆಳ್ಳಿ ಬೆಲೆಯೂ ಹೆಚ್ಚಾಗಿದೆ. ಬುಧವಾರ 1 ಸಾವಿರ ರೂ. ಹೆಚ್ಚಳವಾಗಿದ್ದು, ಕೆ.ಜಿಗೆ 93 ಸಾವಿರ ರೂಪಾಯಿ ತಲುಪಿದೆ. ಇದಕ್ಕೂ ಹಿಂದಿನ ದಿನ ಪ್ರತಿ ಕೆ.ಜಿ ಬೆಳ್ಳಿ 92 ಸಾವಿರ ರೂ.ಗೆ ಮಾರಾಟವಾಗಿತ್ತು.










