ಬೆಂಗಳೂರು: ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಮತ್ತೆ ವಾಹನಗಳ ಟೋಯಿಂಗ್ ವ್ಯವಸ್ಥೆ ಆರಂಭಿಸಲು ಚಿಂತನೆ ನಡೆಸಲಾಗಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ತಿಳಿಸಿದ್ದಾರೆ. ಬೆಂಗಳೂರು ಟ್ರಾಫಿಕ್ ಪೊಲೀಸ್ ವಿಭಾಗವು ನಗರದ ಇನ್ಫೆಂಟ್ರಿ ರಸ್ತೆಯ ಸಂಚಾರ ನಿರ್ವಹಣಾ ಕೇಂದ್ರದಲ್ಲಿ ಆಯೋಜಿಸಿದ್ದ ನಗರ ಚಲನಶೀಲತೆ ಸವಾಲುಗಳು ಮತ್ತು ಪೊಲೀಸರ ಪಾತ್ರ ವಿಷಯದ ಸಂವಾದದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸಂಚಾರದಟ್ಟಣೆ ಹೆಚ್ಚು ಇರುವ ಕೆಲವು ರಸ್ತೆಗಳಲ್ಲಿ ಟೋಯಿಂಗ್ ವ್ಯವಸ್ಥೆ ಮರುಜಾರಿಗೆ ಚಿಂತನೆ ನಡೆಸಿದ್ದೇವೆ. ನೋ ಪಾಕಿರ್ಂಗ್ ಜಾಗದಲ್ಲಿ ವಾಹನಗಳನ್ನು ಪಾರ್ಕ್ ಮಾಡುವುದರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಮತ್ತೆ ಟೋಯಿಂಗ್ ವ್ಯವಸ್ಥೆ ಜಾರಿಗೆ ತರುವ ಕುರಿತು ಚಿಂತನೆ ನಡೆಸುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಟ್ರಾಫಿಕ್ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಟ್ರಾಫಿಕ್ ಜಾಮ್ ಸಮಸ್ಯೆ ಬಗೆಹರಿಸಲು ತಂತ್ರಜ್ಞಾನ ಬಳಕೆ ಸೇರಿದಂತೆ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೂ ಸಮಸ್ಯೆ ಮುಂದುವರೆದಿದೆ. ಹೀಗಾಗಿ ಅಗತ್ಯ ಇದ್ದಲ್ಲಿ ಇನ್ನಷ್ಟು ಟ್ರಾಫಿಕ್ ಪೊಲೀಸ್ ಸ್ಟೇಷನ್ಗಳನ್ನು ಆರಂಭಿಸಲಾಗುವುದು ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ತಿಳಿಸಿದ್ದಾರೆ.










