ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿದ ಗೃಹ ಸಚಿವ ಅಮಿತ್ ಶಾ.

98
firstsuddi

ಶ್ರೀನಗರ : ಪೂರ್ವ ವಲಯ ರಾಜ್ಯಗಳನ್ನು ವಿಭಜನೆ ಮಾಡಿ ಜಮ್ಮು ಕಾಶ್ಮೀರಕ್ಕೆ ನೀಡಿದ್ದ ಸಂವಿಧಾನ ವಿಧಿ 370 ಮತ್ತು 35ಎ ತೆಗೆದುಹಾಕಿದ ಬಳಿಕ ಮೊದಲ ಬಾರಿಗೆ ಮೂರು ದಿನಗಳ ಜಮ್ಮು-ಕಾಶ್ಮೀರ ಪ್ರವಾಸ ಕೈಗೊಂಡಿರುವ ಗೃಹ ಸಚಿವ ಅಮಿತ್ ಶಾ ಅವರು ಇಂದು ಶ್ರೀನಗರಕ್ಕೆ ಭೇಟಿ ಕೊಟ್ಟಿದ್ದಾರೆ. ಅವರ ಈ ಭೇಟಿ ತೀವ್ರ ಕುತೂಹಲ ಕೆರಳಿಸಿದೆ.

ಉಗ್ರರಿಂದ ಇತ್ತೀಚೆಗೆ ನಾಗರಿಕರ ಹತ್ಯೆ ಮತ್ತು ಹೆಚ್ಚಿನ ಉಪಟಳ, ಕಣಿವೆ ಪ್ರದೇಶದಲ್ಲಿ ಬೆಳವಣಿಗೆಗಳ ಬಗ್ಗೆ ಪರಾಮರ್ಶೆ ನಡೆಸಲು ಈ ಭೇಟಿ ಕೈಗೊಂಡಿದ್ದು, ಉನ್ನತ ನಾಗರಿಕ ಮತ್ತು ಭದ್ರತಾ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ ಎಂದು ವರದಿಯಾಗಿದೆ.

ಕೇಂದ್ರ ಗೃಹ ಸಚಿವರ ಭೇಟಿ ಸಂದರ್ಭದಲ್ಲಿ ತೀವ್ರ ಭದ್ರತೆ ಕಲ್ಪಿಸಲಾಗಿದ್ದು, ತಾತ್ಕಾಲಿಕ ಚೆಕ್ ಪಾಯಿಂಟ್ ಗಳನ್ನು ಮತ್ತು ಹೊಸ ಬಂಕರ್ ಗಳನ್ನು ಶ್ರೀನಗರ ಮತ್ತು ಕಣಿವೆ ಪ್ರದೇಶದ ಬೇರೆ ಕಡೆಗಳಲ್ಲಿ ರಚಿಸಲಾಗಿದೆ. ಜೊತೆಗೆ ಇಂದು ಕೆಲವು ಭಾಗಗಳಲ್ಲಿ ಇಂಟರ್ನೆಟ್ ಸಂಪರ್ಕವನ್ನು ತೆಗೆದುಹಾಕಲಾಗಿದೆ. ದಾಲ್ ಸರೋವರದ ತೀರದ ಕೆಲ ರಸ್ತೆಯನ್ನು ಸಾರ್ವಜನಿಕ ಓಡಾಟಕ್ಕೆ ಇಂದಿನಿಂದ ಅಕ್ಟೋಬರ್ 25 ರವರೆಗೆ ನಿಷೇಧಿಸಲಾಗಿದ್ದು, ಬದಲಿ ಮಾರ್ಗಗಗಳನ್ನು ಬಳಸಲು ಸಾರ್ವಜನಿಕರಿಗೆ ಸೂಚಿಸಲಾಗಿದೆ.