ಜಾನಪದ ಉಳಿದರೆ ಮಾತ್ರ ಭಾರತೀಯ ಸಂಸ್ಕೃತಿ ಉಳಿಯುತ್ತದೆ : ಜಿ.ಬಿ.ಸುರೇಶ್.

67
firstsuddi

ಚಿಕ್ಕಮಗಳೂರು : ಆಧುನಿಕತೆಯ ಅಬ್ಬರದಲ್ಲಿ ಕಣ್ಮರೆಯಾಗುತ್ತಿರುವ ನಮ್ಮ ಸಂಸ್ಕೃತಿಯ ಮೂಲ ಬೇರು ಜಾನಪದ ಉಳಿದರೆ ಮಾತ್ರ ಭಾರತೀಯ ಸಂಸ್ಕೃತಿ ಉಳಿಯುತ್ತದೆ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಹೇಳಿದರು.

ಶೃಂಗೇರಿಯ ಕನ್ನಡ ಭವನದಲ್ಲಿ ನಿನ್ನೆ ನಡೆದ ಕರ್ನಾಟಕ ಜಾನಪದ ಪರಿಷತ್ತಿನ ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಜಾನಪದ ತಜ್ಞ ಡಾ.ಸಿ.ಪಿ.ಕೆ ಅವರ ಬದುಕು ಬರಹ ಕುರಿತ ವಿಚಾರ ಸಂಕೀರಣದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಾನಪದ ನಮ್ಮ ಸಂಸ್ಕೃತಿಯ ತಾಯಿ ಬೇರು. ಹಳೆ ಬೇರು ಇದ್ದರೆ ಮಾತ್ರ ಹೊಸ ಚಿಗುರು ಕಂಗೊಳಿಸುತ್ತದೆ. ಅದೇ ರೀತಿ ಜಾನಪದ ಸಂಸ್ಕೃತಿ ನಮ್ಮ ನೆಲದಲ್ಲಿ ಉಳಿದರೆ ಮಾತ್ರ ದೇಶದ ಸಂಸ್ಕೃತಿಗೆ ಹೊಳಪು ಬರುತ್ತದೆ ಎಂದರು.

ಜಾನಪದಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಸ್ಥಳೀಯವಾದದ್ದು, ಆದರೆ ಆಧುನಿಕತೆ ಪರಕೀಯವಾದದ್ದು, ಅದು ಜಾಗತೀಕರಣ ಎಂಬ ಹುತ್ತದ ಹಾವು. ಚಲನಚಿತ್ರದ ಅರೇ ಬರೇ ಸಾಹಿತ್ಯನಮ್ಮ ಸಂಸ್ಕೃತಿಯ ಸೊಗಡನ್ನು ನಾಶಗೊಳಿಸುತ್ತಿದೆ. ಇದರಿಂದಾಗಿ ನಮ್ಮ ಮೌಲ್ಯಾಧಾರಿತ ಹಾಗೂ ಅರ್ಥಗರ್ಭೀತ ಸಾಹಿತ್ಯ ಮೂಲೆ ಗುಂಪಾಗುತ್ತಿದೆ ಎಂದು ವಿಷಾಧಿಸಿದರು.

ಅವಿಭಕ್ತ ಕುಟುಂಬದ ಮೌಲ್ಯವನ್ನು ಜಾನಪದ ಕಲೆ ಸಾಹಿತ್ಯ ಮತ್ತು ಸಂಸ್ಕೃತಿ ಎತ್ತಿ ಹಿಡಿದಿತ್ತು. ಜಾನಪದವನ್ನು ನಾವು ಮರೆತ ಪರಿಣಾಮ ಆಧುನೀಕರಣದ ಮನಸ್ಥಿತಿ ಇಂದು ಹೆತ್ತವರನ್ನು ವೃದ್ಧಾಶ್ರಮಕ್ಕೆ ತಳ್ಳುತ್ತಿದೆ. ಪಾಶ್ಚಾತ್ಯ ಸಂಸ್ಕೃತಿ ನಮ್ಮ ನಡೆ ನುಡಿ ಹಾಗೂ ಆಹಾರ ಪದ್ಧತಿಯನ್ನೂ ನಾಶ ಮಾಡುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತರಾಯಪ್ಪ, ಗ್ರಾಮೀಣ ಪ್ರದೇಶದ ಜಾನಪದ ಸೊಗಡು ನಿಧಾನವಾಗಿ ಸ್ವಂತಿಕೆ ಕಳೆದುಕೊಳ್ಳುತ್ತಿದೆ. ಪಾಶ್ಚಿಮಾತ್ಯ ಸಂಸ್ಕøತಿಯ ಭರಾಟೆಯಲ್ಲಿ ದೇವಾಲಯದಲ್ಲಿ ಭಜನೆ ಮಾಡುವುದು, ರಾಗಿ, ಭತ್ತ ಕುಟ್ಟುವಾಗ, ಬಿತ್ತನೆ ಮಾಡುವಾಗ ಬಾಯಿಂದ ಬರುತ್ತಿದ್ದ ಜಾನಪದ ಗೀತೆಗಳು ಮರೆಯಾಗಿವೆ. ಈ ಹಿನ್ನೆಲೆಯಲ್ಲಿ ಸಂಸ್ಕೃತಿಯ ಮೌಲ್ಯವನ್ನು ಯುವ ಪೀಳಿಗೆಗೆ ತಿಳಿಸಿ ಹೇಳುವ ಅಗತ್ಯವಿದೆ ಎಂದರು.

ಜಾನಪದ ತಜ್ಞ ಡಾ.ಸಿಪಿಕೆ ಅವರ ಬದುಕು ಬರಹ ಕುರಿತು ಮಾತನಾಡಿದ ಸಾಹಿತಿ ಡಾ.ಆಗುಂಬೆ ಗಣೇಶ್ ಹೆಗಡೆ, ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಸಿಪಿಕೆ ಅವರ ಕೊಡುಗೆ ಅಪಾರವಾಗಿದೆ ಎಂದರು.

ಕರ್ನಾಟಕ ಜಾನಪದ ಪರಿಷತ್ತಿನ ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳಿಗೆ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಸಮಾರಂಭದಲ್ಲಿ ಪ್ರತಿಜ್ಞಾವಿಧಿ ಭೋಧಿಸಿದರು. ತರೀಕೆರೆ ತ್ಯಾಗದ ಬಾಗಿಯಶ್ರೀ ಸಿದ್ಧೇಶ್ವರ ತಂಡ ಮತ್ತು ಹೊನ್ನವಳ್ಳಿಯ ಯಕ್ಷಗಾನ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಉಪಾಧ್ಯಕ್ಷ ದೇವರಾಜ್, ತಾಲ್ಲೂಕು ಘಟಕದ ಅಧ್ಯಕ್ಷೆ ಕೌಸ್ತುಭಾ ಎಂ. ಭಟ್, ಗೌರಾವಾಧ್ಯಕ್ಷ ದಿನೇಶ್ ಅಂಗುರ್ಡಿ, ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್, ಪದಾಧಿಕಾರಿಗಳಾದ ನಂದಕಿಶೋರ್, ಗೊಂಡೇನಹಳ್ಳಿ ತಿಪ್ಪೇಶ್, ತಾಲ್ಲೂಕು ಕ.ಸಾ.ಪ ಅಧ್ಯಕ್ಷಎಚ್.ಎಸ್. ಸುಬ್ರಮಣ್ಯ, ಸಿಡಿಪಿಓ ರಾಘವೇಂದ್ರ, ಗಂಗಾಧರಪ್ಪ ಉಪಸ್ಥಿತರಿದ್ದರು.