ನವದೆಹಲಿ : ವಿವಾದಿತ ಪೌರತ್ವ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ದೆಹಲಿಯಲ್ಲಿ ಜಾಮೀಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ನಡೆಸುತ್ತಿರುವ ಹಿಂಸಾತ್ಮಕ ಪ್ರತಿಭಟನೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ಕಾಂಗ್ರೆಸ್‍ನ ಮಾಜಿ ಶಾಸಕ ಸೇರಿ ಇತರ ಆರು ಮಂದಿ ವಿರುದ್ಧ ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ. ಪೊಲೀಸರು ಸಲ್ಲಿಸಿರುವ ಪ್ರಾಥಮಿಕ ವರದಿಯಲ್ಲಿ ಮಾಜಿ ಶಾಸಕ ಆಸಿಫ್ ಖಾನ್ ಮತ್ತು ಇತರ ಸ್ಥಳೀಯ ರಾಜಕಾರಣಿಗಳಾದ ಆಶು ಖಾನ್, ಮುಸ್ತಾಫಾ ಮತ್ತು ಹೈದರ್, ಎಐಎಸ್‍ಎ ಸದಸ್ಯ ಚಂದನ್ ಕುಮಾರ್, ಎಸ್‍ಐಒ ಸದಸ್ಯ ಆಸಿಫ್ ತನ್ಹಾ ಮತ್ತು ಸಿವೈಎಸ್‍ಎಸ್ ಸದಸ್ಯ ಕಾಸಿಮ್ ಉಸ್ಮಾನ್ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.
ಎಫ್‍ಐಆರ್ ನಲ್ಲಿ ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಸಂಸತ್ ಭವನ ಮತ್ತು ರಾಷ್ಟ್ರಪತಿ ಭವನದವರೆಗೆ ಕೆಲವರು ಪ್ರತಿಭಟನಾ ಮೆರವಣಿಗೆ ಸಾಗುತ್ತಿದ್ದರು. ಜಾಮಿಯಾ ವಿಶ್ವ ವಿದ್ಯಾಯದ ಬಳಿ 3ಗಂಟೆ ವೇಲೆಗೆ ಪೊಲೀಸರ ತೀವ್ರ ಭದ್ರತೆಯಿತ್ತು. ಕೆಲವು ಪ್ರತಿಭಟನಾಕಾರರು, ಮಹಿಳೆಯರು ಮತ್ತು ರಾಜಕಾರಣಿಗಳು ವಿಶ್ವವಿದ್ಯಾಲಯದ ಕಡೆಯಿಂದ ಬಂದಿದ್ದರು. ಈ ವೇಳೆ ಮಾಜಿ ಶಾಸಕ ಆಸಿಫ್ ಹಾಗೂ ಆಶು ಅವರು ಪ್ರತಿಭಟನಾಕಾರರನ್ನು ಪ್ರಚೋದಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುವಂತೆ ಮಾಡಿದ್ದಾರೆ. ಈ ವೇಳೆ ಪ್ರತಿಭಟನೆ ಹಿಂಸಾರೂಪಕ್ಕೆ ತಾಳಿತ್ತು. ಅಲ್ಲದೇ ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಪ್ರತಿಭಟನಾಕಾರರಿಗೆ ಶಾಂತಿ ಕಾಪಾಡುವಂತೆ ಎಷ್ಟು ಮನವಿ ಮಾಡಿಕೊಂಡರೂ ಅವರೂ ಕೇಳಲು ಸಿದ್ಧವಿರಲಿಲ್ಲ. ವಿಶ್ವವಿದ್ಯಾಲಯದ ಬಳಿ ಸಿಎಟಿ ಆಂಬುಲೆನ್ಸ್ ನ್ನು ಬೆಂಕಿ ಹಚ್ಚಿ ಧ್ವಂಸಗೊಳಿಸಿದ್ದಾರೆ. ಹೀಗಾಗಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಆಶ್ರುವಾಯುವನ್ನು ಸಿಡಿಸಬೇಕಾಯಿತು. ಈ ವೇಳೆ ಹಲವು ಪೊಲೀಸರಿಗೂ ಗಂಭೀರವಾಗಿ ಗಾಯವಾಗಿದೆ. ಸುಮಾರು 70ರಿಂದ 80 ಬೈಕ್‍ಗಳನ್ನು ಧ್ವಂಸ ಮಾಡಲಾಗಿದೆ ಎಂದು ಎಫ್‍ಐಆರ್ ನಲ್ಲಿ ಉಲ್ಲೇಖಿಸಿದ್ದಾರೆ.










