ಬಿಜೆಪಿ ಬದಲಾಯಿಸಬೇಕಾಗಿರುವುದು ಇಂದಿರಾ ಕ್ಯಾಂಟೀನ್ ಹೆಸರಲ್ಲ, ತನ್ನೊಳಗಿನ ಸಣ್ಣ ಬುದ್ದಿಯನ್ನು : ಸಿದ್ದರಾಮಯ್ಯ

391
firstsuddi

ಬೆಂಗಳೂರು : ಟಿಪ್ಪು ಜಯಂತಿ ಆಚರಣೆಯನ್ನು ರದ್ದು ಮಾಡುವ ಮೂಲಕ ವಿರೋಧ ಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದ್ದ ಬಿಜೆಪಿ ಈಗಾ ಇಂದಿರಾ ಕ್ಯಾಂಟೀನ್ ಹೆಸರನ್ನು ಬದಲಾಯಿಸಲು ಮುಂದಾಗಿದ್ದು, ಈ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಟ್ವಿಟರ್ ಮೂಲಕ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಟ್ವೀಟ್‍ನಲ್ಲಿ “ಇಂದಿರಾ ಕ್ಯಾಂಟೀನ್ ಹೆಸರನ್ನು ಬದಲಾಯಿಸಲು ಹೊರಟಿರುವ ಬಿಜೆಪಿ ಸರ್ಕಾರದ ನಡೆ ಖಂಡನೀಯ. ಇಂತಹ ಕ್ಷುಲ್ಲಕ ರಾಜಕಾಣವನ್ನು ತಕ್ಷಣ ಕೈ ಬಿಡಬೇಕು ಎಂದು ಆಗ್ರಹಪಡಿಸುತ್ತೇನೆ. ಬಿಜೆಪಿ ಬದಲಾಯಿಸಬೇಕಾಗಿರುವುದು ಇಂದಿರಾ ಕ್ಯಾಂಟೀನ್ ಹೆಸರಲ್ಲ, ತನ್ನೊಳಗಿನ ಸಣ್ಣ ಬುದ್ದಿಯನ್ನು.
ಮಾಜಿ ಪ್ರಧಾನಿ ಇಂದಿರಾಗಾಂಧಿಯವರು ಗರೀಬಿ ಹಟಾವೋ ಘೋಷಣೆಯ ಮೂಲಕ ಬಡತನದ ವಿರುದ್ಧ ಯುದ್ದ ಸಾರಿ ಗೆದ್ದವರು. ಅವರು ಕೇವಲ ಕಾಂಗ್ರೆಸ್ ಪಕ್ಷದ ನಾಯಕಿಯಲ್ಲ, ದೇಶದ ನಾಯಕಿ, ಬಡವರ ಪಾಲಿನ ಆಪತ್ಪಾಂಧವರಾಗಿದ್ದರು. ಈ ಕಾರಣಕ್ಕಾಗಿ ಇಂದಿರಾ ಕ್ಯಾಂಟೀನ್ ಎಂದು ನಾಮಕರಣ ಮಾಡಲಾಗಿತ್ತು. ಇಂದಿರಾ ಕ್ಯಾಂಟೀನ್ಗೆ ನಮ್ಮೆಲ್ಲರ ಹೆಮ್ಮೆಯ ಕವಿ ಮಹರ್ಷಿ ವಾಲ್ಮೀಕಿಯವರ ಹೆಸರು ಇಡುವ ಯೋಚನೆ ಇದೆಯಂತೆ. ಮಹರ್ಷಿ ವಾಲ್ಮೀಕಿಯವರ ಬಗ್ಗೆ ನಮಗೆಲ್ಲ ಅಪಾರವಾದ ಗೌರವ ಇದೆ. ಅವರ ಹೆಸರನ್ನು ಬಿಜೆಪಿ ತನ್ನ ಕ್ಷುಲ್ಲಕ ರಾಜಕಾರಣಕ್ಕೆ ದುರ್ಬಳಕೆ ಮಾಡಿಕೊಂಡು ಅವರಿಗೆ ಅವಮಾನ ಮಾಡಲು ಹೊರಟಿದೆ.
ಮಹರ್ಷಿ ವಾಲ್ಮೀಕಿಯವರು ರಾಮಾಯಣ ಎಂಬ ಮಹಾಕಾವ್ಯವನ್ನು ಬರೆದ ಮಹಾಕವಿ. ತಳಸಮುದಾಯದಲ್ಲಿ ಹುಟ್ಟಿ ಅಕ್ಷರ ಜಗತ್ತಿನ ಮೇರುಪರ್ವತ ಏರಿದ ಸಾಧಕ. ಅವರ ಸಾಧನೆಗೆ ಹೊಂದುವಂತಹ ಯೋಜನೆಯನ್ನು ಬಿಜೆಪಿ ಸರ್ಕಾರ ಪ್ರಾರಂಭಿಸಿ ಅವರಿಗೆ ಗೌರವ ತೋರಲಿ. ಅದನ್ನು ನಾನು ಸ್ವಾಗತಿಸುತ್ತೇನೆ.
ನಮ್ಮ ಸರ್ಕಾರ ಜಾರಿಗೆ ತಂದಿರುವ ಪ್ರತಿಯೊಂದು ಬಡವರ ಪರ ಯೋಜನೆಗಳನ್ನು ರದ್ದುಮಾಡಲು ಹೊರಟಿದ್ದ ಬಿಜೆಪಿ ಸರ್ಕಾರ ಈಗ ಜನಾಕ್ರೋಶಕ್ಕೆ ಹೆದರಿ ಹೆಸರು ಬದಲಾಯಿಸಲು ಹೊರಟಿದೆ. ಇವರಿಗೆ ಬಡವರ ಪರವಾದ ಹೊಸ ಯೋಜನೆಗಳನ್ನು ರೂಪಿಸುವ ಶಕ್ತಿಯೂ ಇಲ್ಲ, ಮನಸ್ಸೂ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.