ಜಾಯಿಂಟ್ ವ್ಹೀಲ್‍ನಲ್ಲಿ ಆಟವಾಡುತ್ತಿದ್ದಾಗ ಬಾಲಕಿಯ ತಲೆಕೂದಲು ಸಿಲುಕಿದ ಪ್ರಕರಣ – ಮೂವರ ವಿರುದ್ಧ ಎಫ್‍ಐಆರ್ ದಾಖಲು…

54
firstsuddi

ಮಂಡ್ಯ : ಜಾಯಿಂಟ್ ವ್ಹೀಲ್ ನಲ್ಲಿ ಆಟವಾಡುತ್ತಿದ್ದಾಗ ಬಾಲಕಿಯ ತಲೆಕೂದಲು ಸಿಲುಕಿ, ಚರ್ಮದ ಸಮೇತವಾಗಿ ಕಿತ್ತು ಬಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಯಿಂಟ್ ವ್ಹೀಲ್ ಆಟಿಕೆ ಮಾಲೀಕ ಹಾಗೂ ಇಬ್ಬರು ಅಧಿಕಾರಿಗಳ ಮೇಲೆ ಎಫ್ಐಆರ್ ದಾಖಲಾಗಿದೆ.

ಜಾಯಿಂಟ್ ವ್ಹೀಲ್ ಆಟದಲ್ಲಿ ಮುಂಜಾಗ್ರತೆ ವಹಿಸದ ಮಾಲೀಕ ರಮೇಶ್ ಹಾಗೂ ಮುಂಜಾಗ್ರತ ಕ್ರಮಗಳನ್ನು ಪರಿಶೀಲಿಸದೇ, ತನಿಖೆ ನಡೆಸದೇ ಅನುಮತಿ ನೀಡಿ ನಿರ್ಲಕ್ಷ್ಯ ವಹಿಸಿದ ಆರೋಪದ ಮೇಲೆ ರಂಗನಾಥಸ್ವಾಮಿ ದೇಗುಲ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಮ್ಮೇಗೌಡ ಹಾಗೂ ಪುರಸಭೆ ಮುಖ್ಯಾಧಿಕಾರಿ ಸಂದೀಪ್ ಮೇಲೆ ಎಫ್.ಐ.ಆರ್ ದಾಖಲಿಸಲಾಗಿದೆ.

ಶನಿವಾರ ರಾತ್ರಿ ರಥಸಪ್ತಮಿ ಹಿನ್ನಲೆ ಶ್ರೀರಂಗನಾಥ ಬ್ರಹ್ಮೋರಥೋತ್ಸವ ಜಾತ್ರೆ ಇತ್ತು. ಆ ವೇಳೆ ರಂಗನಾಥ ಮೈದಾನದಲ್ಲಿ ರಮೇಶ್ ಜಾಯಿಂಟ್ ವ್ಹೀಲ್ ಆಟಿಕೆ ನಡೆಸ್ತಿದ್ದ. 50 ರೂ. ಕೊಟ್ಟು ಜಾಯಿಂಟ್ ವ್ಹೀಲ್ ಏರಿದ್ದ 14 ವರ್ಷದ ಶ್ರೀವಿದ್ಯಾ ಎಂಬ ಬಾಲಕಿಯ ತಲೆ ಕೂದಲು ವ್ಹೀಲ್ ಒಂದಕ್ಕೆ ಸಿಕ್ಕಿಕೊಂಡಿದೆ. ಆದರೆ ಕೂದಲು ಸಿಕ್ಕ ತಕ್ಷಣ ಜಾಯಿಂಟ್ ವ್ಹೀಲ್ ಅನ್ನು ನಿಲ್ಲಿಸದ ಕಾರಣ ತಲೆಕೂದಲು ಸಮೇತ ತಲೆ ಚರ್ಮವೇ ಬೇರ್ಪಟ್ಟಿತ್ತು. ಗಂಭೀರವಾಗಿ ಗಾಯಗೊಂಡಿರುವ ಬಾಲಕಿಗೆ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸದ್ಯ ಕುಟುಂಬಸ್ಥರ ದೂರಿನನ್ವಯ ಶ್ರೀರಂಗಪಟ್ಟಣ ಪೊಲೀಸರು ಇದೀಗ ಮೂವರ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ.