ನವದೆಹಲಿ : 2002ರ ಗುಜರಾತ್ ಗಲಭೆ ಕುರಿತು ಬಿಬಿಸಿ ತಯಾರಿಸಿರುವ ಸಾಕ್ಷ್ಯಚಿತ್ರ ಪ್ರಸಾರ ಮಾಡದಂತೆ ನಿರ್ಬಂಧಿಸಿರುವ ಕೇಂದ್ರ ಸರ್ಕಾರದ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ನಲ್ಲಿ ಪಿಐಎಲ್ ಸಲ್ಲಿಸಲಾಗಿದೆ. ಫೆಬ್ರವರಿ 6 ರಂದು ಈ ಅರ್ಜಿಗಳ ವಿಚಾರಣೆ ನಡೆಯಲಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಜೆ ಬಿ ಪರ್ದಿವಾಲಾ ಅವರನ್ನೊಳಗೊಂಡ ಪೀಠವು ವಕೀಲ ಎಂ.ಎಲ್ ಶರ್ಮಾ ಮತ್ತು ಹಿರಿಯ ವಕೀಲ ಸಿ ಯು ಸಿಂಗ್ ಅವರು ಈ ವಿಷಯದ ಕುರಿತು ತಮ್ಮ ಪ್ರತ್ಯೇಕ ಪಿಐಎಲ್ ಗಳನ್ನು ತುರ್ತು ಪಟ್ಟಿ ಮಾಡುವಂತೆ ಕೋರಿ ಸಲ್ಲಿಸಿದ ಅರ್ಜಿಗಳನ್ನು ಗಣನೆಗೆ ತೆಗೆದುಕೊಂಡಿತು. ಫೆಬ್ರವರಿ 6ರಂದು ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಗೆ ಸುಪ್ರೀಂಕೋರ್ಟ್ ಒಪ್ಪಿಕೊಂಡಿದೆ.
ಬಿಬಿಸಿ ತಯಾರಿಸಿರುವ ಸಾಕ್ಷ್ಯಚಿತ್ರದ ಭಾಗ 1 ಮತ್ತು ಭಾಗ 2 ಇವುಗಳನ್ನು ಸುಪ್ರೀಂಕೋರ್ಟ್ ತರಿಸಿಕೊಂಡು ಪರಿಶೀಲಿಸಬೇಕೆಂದು ಮತ್ತು 2002ರ ಗುಜರಾತ್ ಗಲಭೆಯಲ್ಲಿ ನೇರವಾಗಿ ಹಾಗೂ ಪರೋಕ್ಷವಾಗಿ ಭಾಗಿಯಾಗಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ.
ಬಿಬಿಸಿ 2002ರ ಗುಜರಾತ್ ಗಲಭೆಯ ಸಂದರ್ಭದಲ್ಲಿ ಪಿಎಂ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಅವಧಿಯ ಆಡಳಿತವನ್ನು ಗುರಿಯಾಗಿಸಿಕೊಂಡು ಎರಡು ಭಾಗಗಳ ವಿಡಿಯೋ ಸರಣಿಯನ್ನು ಪ್ರಸಾರ ಮಾಡಿತ್ತು. ಸಾಕ್ಷ್ಯಚಿತ್ರದ ಬಗ್ಗೆ ದೇಶದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾದ ನಂತರ ಇದನ್ನು ಇಂಟರ್ ನೆಟ್‍ನಿಂದ ತೆಗೆದುಹಾಕಲು ಕೇಂದ್ರ ಸರ್ಕಾರ ಆದೇಶಿಸಿತ್ತು.










