ಗದಗ: ಇಲ್ಲಿನ ಜಿಮ್ಸ್ ಆಸ್ಪತ್ರೆಯಲ್ಲಿ ರೀಲ್ಸ್ ಮಾಡಿ ಹುಚ್ಚಾಟ ಮೆರೆದಿದ್ದ 38 ಜನ ವೈದ್ಯಕೀಯ ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿದೆ.
ಪ್ರಕರಣದ ಹಿನ್ನಲೆ: ಜಿಮ್ಸ್ ಆಸ್ಪತ್ರೆಯ ಜನರಲ್ ವಾರ್ಡ್, ಕಾರಿಡಾರ್, ಮಕ್ಕಳ ವಾರ್ಡ್, ತರಗತಿ ಕೊಠಡಿ ಸೇರಿದಂತೆ ಆಸ್ಪತ್ರೆಯ ಎಲ್ಲಾ ಭಾಗಗಳಲ್ಲಿ ಹಿಂದಿ ಮತ್ತು ಕನ್ನಡ ಚಿತ್ರಗಳ ಹಾಡಿಗೆ ಸ್ಟೂಡೆಂಟ್ಸ್ ರೀಲ್ಸ್ ಮಾಡಿದ್ದರು. ಈ ರೀಲ್ಸ್ ಅನ್ನು ವಿದ್ಯಾರ್ಥಿಗಳು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು. ಬಳಿಕ ಇದು ಸಾಕಷ್ಟು ವೈರಲ್ ಆಗಿತ್ತು. ಆರೋಗ್ಯ ಸಮಸ್ಯೆಯಾಗಿ ಆಸ್ಪತ್ರೆ ಸೇರಿರೋ ಬಡರೋಗಿಗಳ ಸಂಕಟ ಒಂದೆಡೆಯಾದ್ರೆ, ಇತ್ತ ವೈದ್ಯಕೀಯ ವಿದ್ಯಾರ್ಥಿಗಳ ಮಸ್ತ್ ಮಜಾ ರೀಲ್ಸ್ ಮತ್ತೊಂದೆಡೆ ಆಗಿದೆ. ರೀಲ್ಸ್ ಮಾಡೋಕೆ ಬೇರೆ ಜಾಗ ಸಿಗಲಿಲ್ವಾ ಅಂತ ನೆಟ್ಟಿಗರು ತಮ್ಮ ಆಕ್ರೋಶ ಹೊರ ಹಾಕಿದ್ದರು.
ಇನ್ನು ಈ ಘಟನೆ ಜಿಮ್ಸ್ ನಿರ್ದೇಶಕ ಡಾ.ಬಸವರಾಜ ಬೊಮ್ಮನಹಳ್ಳಿ ಅವರ ಗಮನಕ್ಕೆ ಬಂದಿದ್ದು, ರೀಲ್ಸ್ ಮಾಡಿದ್ದ ಒಟ್ಟು 38 ವಿದ್ಯಾರ್ಥಿಗಳಿಗೆ ಹತ್ತು ದಿನಗಳ ಕಾಲ ಅಮಾನತು ಶಿಕ್ಷೆ ನೀಡಿದ್ದಾರೆ.
ರೀಲ್ಸ್ ಮಾಡಿರುವ ಎಲ್ಲರೂ ಎಂಬಿಬಿಎಸ್ ಇಂಟರ್ನ್‍ಶಿಪ್ ವಿದ್ಯಾರ್ಥಿಗಳು. ಅವರನ್ನು 10 ದಿನಗಳ ಕಾಲ ಅಮಾನತು ಮಾಡಲಾಗಿದೆ. ಆಸ್ಪತ್ರೆಯಲ್ಲಿ ಈ ರೀತಿ ಮಾಡಿರುವುದು ದೊಡ್ಡ ಅಪರಾಧ. ಈ ರೀತಿ ವೀಡಿಯೋ ಮಾಡಲು ನಾವ್ಯಾರು ಅನುಮತಿ ಕೊಟ್ಟಿಲ್ಲ. ರೋಗಿಗಳಿಗೆ ಅನಾನುಕೂಲ ಆಗುವ ರೀತಿ ನಡೆದು ಕೊಂಡಿರುವುದು ತಪ್ಪು. ಯಾರೇ ಇರಲಿ, ಆಸ್ಪತ್ರೆಯಲ್ಲಿ ಈ ರೀತಿ ಮಾಡಿದರೆ ಅಂತವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ವಿದ್ಯಾರ್ಥಿಗಳಿಗೆ ಸಿಗಬೇಕಾಗಿದ್ದ ಪೋಸ್ಟಿಂಗ್ 10 ದಿನಗಳ ಕಾಲ ತಡವಾಗಿ ಸಿಗಲಿದೆ ಎಂದು ಅವರು ತಿಳಿಸಿದ್ದಾರೆ.










