ಬೆಂಗಳೂರು: ರೌಡಿ ಶೀಟರ್ ಒಬ್ಬ ತನ್ನ ಪರಿಚಯಸ್ಥ ಮಹಿಳೆಗೆ ಜೈಲಿನಲ್ಲಿದ್ದುಕೊಂಡೇ ಮಾರ್ಫ್ ಮಾಡಿದ ಬೆತ್ತಲೆ ಫೋಟೋ ಕಳುಹಿಸಿ ಹಣ ನೀಡುವಂತೆ ಬೆದರಿಕೆ ಹಾಕಿರುವ ಘಟನೆ ನಗರದಲ್ಲಿ ನಡೆದಿದೆ.
ರೌಡಿಶೀಟರ್ ಮನೋಜ್ ಅಲಿಯಾಸ್ ಕೆಂಚ ಬ್ಯ್ಲಾಕ್ಮೇಲ್ ಮಾಡಿದ ಆರೋಪಿ. ಕಳೆದ ಆಗಸ್ಟ್‌ನಲ್ಲಿ ಆರೋಪಿ ಕೆಂಚ, ಮಹಿಳೆಯ ತಾಯಿಗೆ ವಾಟ್ಸಪ್ ಮೂಲಕ ಮಗಳ ಬೆತ್ತಲೆ ಫೋಟೋ ಕಳುಹಿಸಿ 40 ಸಾವಿರ ರೂ. ಹಣಕ್ಕೆ ಡಿಮ್ಯಾಂಡ್ ಮಾಡಿದ್ದ. ಅದರಂತೆ ಮಹಿಳೆ ತಾಯಿ ಚೋಟು ಎಂಬವನ ಖಾತೆಗೆ 20 ಸಾವಿರ ರೂ., ಮತ್ತೊಬ್ಬನ ಖಾತೆಗೆ 20 ಸಾವಿರ ರೂ. ಹಣ ಹಾಕಿದ್ದರು.
ನಂತರ ಫೆಬ್ರವರಿ 9 ರಂದು ಮನೋಜ್ ಸಹಚರ ಕಾರ್ತಿಕ್ ಮಹಿಳೆಯ ತಾಯಿಗೆ ವಾಟ್ಸಪ್ ಮೂಲಕ ಕರೆ ಮಾಡಿ, ನಾನು (ಕಾರ್ತಿಕ್) ಮನೋಜ್ ಕಡೆಯ ಹುಡುಗ. ನೀವು 5 ಲಕ್ಷ ರೂ. ಕೊಡದಿದ್ದರೆ ನಿಮ್ಮ ಮಗಳ ನಗ್ನ ಫೋಟೋವನ್ನು ನಿನ್ನ ಅಳಿಯನಿಗೆ ಕಳಸುತ್ತೇನೆ ಅಂತ ಬ್ಯ್ಲಾಕ್ಮೇಲ್ ಮಾಡಿದ್ದಾನೆ. ಇದಾದ ಬಳಿಕ ಫೆಬ್ರವರಿ 12 ರಂದು ಮತ್ತೆ ವಾಟ್ಸಪ್, ಫೇಸ್‌ಬುಕ್ ಮೆಸೆಂಜರ್‌ಗಳಲ್ಲಿ ಕಾಲ್ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಇದರಿಂದ ಮನನೊಂದ ಮಹಿಳೆ ಹಾಗೂ ಆಕೆಯ ತಾಯಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮಹಿಳೆಯ ದೂರಿನ ಅನ್ವಯ ಮಾಹಿತಿ ತಂತ್ರಜ್ಞಾನ ಆ್ಯಕ್ಟ್ 67, ಐಪಿಸಿ ಸೆಕ್ಷನ್ 34, 384ರ ಅಡಿ ಪ್ರಕರಣ ದಾಖಲಿಸಿಕೊಂಡಿರುವ ಯಲಹಂಕ ಟೌನ್ ಪೊಲೀಸರು ಮತ್ತೊಬ್ಬ ಆರೋಪಿ ಕಾರ್ತಿಕ್ ಪತ್ತೆಗೆ ಬಲೆ ಬೀಸಿದ್ದಾರೆ. ಸದ್ಯ ಮನೋಜ್ನನ್ನು ಜೈಲಿನಿಂದ ಬಾಡಿವಾರೆಂಟ್ ಮೇಲೆ ವಶಕ್ಕೆ ಪಡೆಯಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.










