ಬೆಂಗಳೂರು : ರಾತ್ರೋರಾತ್ರಿ ಮನೆಗೆ ನುಗ್ಗಿ ಜೋಡಿ ಕೊಲೆ ಮಾಡಿದ್ದ ಆರೋಪಿಯನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಏಪ್ರಿಲ್ 7ರ ತಡರಾತ್ರಿ ಹಣ, ಮೊಬೈಲ್, ಚಿನ್ನಾಭರಣವನ್ನು ದೋಚುವ ಸಲುವಾಗಿ ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಪಶ್ಚಿಮ ಬಂಗಾಳ ಮೂಲದ ಮಮತಾ ಬಸು ಹಾಗೂ ಈಕೆಯ ಮಗನ ಸ್ನೇಹಿತ ಒಡಿಶಾ ಮೂಲದ ದೇವಬ್ರತಾ ಎಂಬುವರನ್ನು ಆರೋಪಿ ಮಂಜುನಾಥ್ ಅಲಿಯಾಸ್ ಅಂಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದ.
ಕೋಣನಕುಂಟೆ ಬಳಿ ತಲೆಮರೆಸಿಕೊಂಡಿದ್ದಾನೆ ಎಂಬ ಮಾಹಿತಿ ತಿಳಿದ ಪೊಲೀಸರು, ಆತನನ್ನು ಬಂಧಿಸಲು ಮುಂದಾಗಿದ್ದರು. ಆಗ ಪೊಲೀಸರ ಮೇಲೆಯೇ ಆರೋಪಿ ಮಂಜುನಾಥ್ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ಆತ್ಮರಕ್ಷಣೆಗಾಗಿ ಇನ್ಸ್ ಪೆಕ್ಟರ್ ಕಿಶೋರ್ ಆರೋಪಿ ಕಾಲಿಗೆ ಗುಂಡು ಹಾರಿಸಿ ಆತನನ್ನು ಬಂಧಿಸಿದ್ದಾರೆ. ಸದ್ಯ ಆರೋಪಿ ಮಂಜುನಾಥ್ ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎನ್ನಲಾಗಿದೆ.










