ಬೆಂಗಳೂರು: ಬೆಂಗಳೂರು ನಗರದಲ್ಲಿ ಸುರಕ್ಷಿತ ಪ್ರಯಾಣಕ್ಕಾಗಿ, ನೈಜ ಸಮಯದ ಸಂಚಾರ ದಟ್ಟಣೆಯ ವರದಿ, ಅಪಘಾತಗಳ ಮಾಹಿತಿ, ನಿಯಮ ಉಲ್ಲಂಘನೆಗಳ ಕುರಿತು ವರದಿ ನೀಡಲು ಮತ್ತು ಆನ್‍ಲೈನ್ ಮೂಲಕ ದಂಡ ಪಾವತಿಸಲು ಬೆಂಗಳೂರು ಸಂಚಾರಿ ಪೊಲೀಸರು ಅಸ್ತ್ರಂ ಆ್ಯಪ್ ಅನ್ನು ಪರಿಚಯಿಸಿದೆ. ಗೃಹ ಸಚಿವ ಡಾ. ಜಿ. ಪರಮೇಶ್ವರ ಗುರುವಾರ ಆಕ್ಷನ್‍ಅಬಲ್ ಇಂಟೆಲಿಜೆನ್ಸ್ ಫಾರ್ ಸಸ್ಟೈನಬಲ್ ಟ್ರಾಫಿಕ್ ಮ್ಯಾನೇಜ್‍ಮೆಂಟ್ ಎಂಬ ಮೊಬೈಲ್ ಅಪ್ಲಿಕೇಷನ್ ಲೋಕಾರ್ಪಣೆಗೊಳಿಸಿದರು. ಅಸ್ತ್ರಂ ಆ್ಯಪ್ ಮೂಲಕ ವಾಹನ ಸವಾರರು ತಾವು ತೆರಳುವ ರಸ್ತೆಯಲ್ಲಿನ ಸಂಚಾರ ದಟ್ಟಣೆಯನ್ನು ಮೊದಲೇ ತಿಳಿಯಬಹುದು. ಬದಲಿ ಮಾರ್ಗದಲ್ಲಿ ಸಂಚರಿಸಲು ಆ್ಯಪ್ ಸಹಾಯ ಮಾಡುತ್ತದೆ. ಸಂಚಾರ ದಟ್ಟಣೆ ವರದಿ ಮಾತ್ರವಲ್ಲದೇ, ನೀವು ಒಂದು ಭಾರಿ ಓಡಾಡಿದ ರಸ್ತೆಯ ಅಪ್ಡೇಟ್ ಸಹ ನೀಡುತ್ತದೆ. ರಸ್ತೆ ಅಪಘಾತಗಳನ್ನು ವರದಿ ಮಾಡಬಹುದು. ಸಂಚಾರ ನಿಯಮ ಉಲ್ಲಂಘನೆ, ದಂಡ ಮಾಹಿತಿ, ಸಂಚಾರ ಸಲಹೆಗಳನ್ನು ಕೂಡ ಆ್ಯಪ್ ಮೂಲಕ ಕೂತಲ್ಲೇ ತಿಳಿದುಕೊಳ್ಳಬಹುದಾಗಿದೆ.










