ಡಿ ಗುಕೇಶ್, ಮನು ಭಾಕರ್ ಸೇರಿದಂತೆ ನಾಲ್ವರು ಕ್ರೀಡಾ ಸಾಧಕರು ಖೇಲ್ ರತ್ನ ಪ್ರಶಸ್ತಿಗೆ ಆಯ್ಕೆ.

42

ಕಳೆದ ವರ್ಷ ನಡೆದಿದ್ದ ಪ್ಯಾರಿಸ್ ಒಲಿಂಪಿಕ್ಸ್‍ನಲ್ಲಿ ದೇಶಕ್ಕಾಗಿ 2 ಕಂಚಿನ ಪದಕಗಳನ್ನು ಗೆದ್ದುಕೊಟ್ಟಿದ್ದ ಮಹಿಳಾ ಶೂಟರ್ ಮನು ಭಾಕರ್ ಅವರನ್ನು ಖೇಲ್ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ. ಇವರೊಂದಿಗೆ ವಿಶ್ವ ಚೆಸ್ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದ ಚೆಸ್ ಚತುರ ಡಿ ಗುಕೇಶ್ ಹಾಗೂ ಭಾರತದ ಪುರುಷರ ಹಾಕಿ ತಂಡದ ನಾಯಕ ಹರ್ಮನ್‍ಪ್ರೀತ್ ಸಿಂಗ್ ಮತ್ತು ಪ್ಯಾರಾಲಿಂಪಿಯನ್ ಪ್ರವೀಣ್ ಕುಮಾರ್ ಕೂಡ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಜನವರಿ 17 ರಂದು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ವಿಶೇಷವಾಗಿ ಆಯೋಜಿಸಲಾಗುವ ಸಮಾರಂಭದಲ್ಲಿ ಈ 4 ಮಂದಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಖೇಲ್ ರತ್ನ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ. ಆರಂಭದಲ್ಲಿ ಖೇಲ್ ರತ್ನ ಪ್ರಶಸ್ತಿಗೆ ಮನು ಭಾಕರ್ ಅವರ ಹೆಸರನ್ನು ಪರಿಗಣಿಸಿಲ್ಲ ಎಂಬ ವಿಷಯ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿತ್ತು. ಇದರಿಂದಾಗಿ ತೀರ ಅಸಮಾಧಾನಗೊಂಡಿದ್ದ ಮನು ಭಾಕರ್ ಅವರ ತಂದೆ ಯಾರೂ ಕೂಡ ನಿಮ್ಮ ಮಕ್ಕಳನ್ನು ಕ್ರೀಡೆಗೆ ಪ್ರೋತ್ಸಾಹಿಸಬೇಡಿ, ನಾವು ಅರ್ಜಿ ಸಲ್ಲಿಸಿದ್ದರೂ ಅದನ್ನು ಕಡೆಗಣಿಸಲಾಗಿದೆ ಎಂದು ತಿಳಿಸಿದ್ದಾರೆ. ಇತ್ತ ತಾಳ್ಮೆಯಿಂದ ಉತ್ತರ ನೀಡಿದ್ದ ಮನು, ನನ್ನ ಅರ್ಜಿ ಸಲ್ಲಿಕೆಯಲ್ಲಿ ಲೋಪ ದೋಷಗಳಾಗಿರಬೇಕು. ಈ ಪ್ರಶಸ್ತಿಗೆ ನನ್ನನ್ನು ಪರಿಗಣಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದರು. ಇದೀಗ ಅವರ ನಂಬಿಕೆಯಂತೆ ಒಲಿಂಪಿಕ್ಸ್ ಪದಕ ವಿಜೇತೆಯನ್ನು ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಮನು ಭಾಕರ್, ಕಳೆದ ವರ್ಷ ನಡೆದಿದ್ದ ಪ್ಯಾರಿಸ್ ಒಲಿಂಪಿಕ್ಸ್‍ನಲ್ಲಿ 10 ಮೀಟರ್ ಏರ್ ಪಿಸ್ತೂಲ್ ಮತ್ತು 25 ಮೀಟರ್ ಏರ್ ಪಿಸ್ತೂಲ್‍ನಲ್ಲಿ 3ನೇ ಸ್ಥಾನ ಪಡೆಯುವ ಮೂಲಕ ಕಂಚಿನ ಪದಕ ಪಡೆದಿದ್ದರು. ಇದಲ್ಲದೆ ಒಂದೇ ಒಲಿಂಪಿಕ್ಸ್‍ನಲ್ಲಿ 2 ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು.