ಡಿ.ರೂಪಾ, ರೋಹಿಣಿ ಸಿಂಧೂರಿಗೆ ನೋಟಿಸ್ ನೀಡಲು ಸಿಎಂ ಸೂಚನೆ…

64
firstsuddi

ಬೆಂಗಳೂರು: ಐಪಿಎಸ್ ಅಧಿಕಾರಿ ಡಿ.ರೂಪಾ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಯವರ ನಡುವಿನ ಕಿತ್ತಾಟ ತಾರಕಕ್ಕೇರಿದ ಬೆನ್ನಲ್ಲೇ ಇಬ್ಬರಿಗೂ ನೋಟಿಸ್ ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ಸೂಚಿಸಿದ್ದಾರೆ.

ವೈಯಕ್ತಿಕ ವಿಚಾರಗಳನ್ನು ಮುಂದಿಟ್ಟುಕೊಂಡು ಅಧಿಕಾರಿಗಳು ಮಾಧ್ಯಮಗಳ ಎದುರು ಚರ್ಚಿಸುವುದು ಸರಿಯಲ್ಲ. ಇವರಿಬ್ಬರ ಕಿತ್ತಾಟದಿಂದ ಸರ್ಕಾರಕ್ಕೆ ಮುಜಗರ ಉಂಟಾಗಿದೆ. ಜವಾಬ್ದಾರಿಯುತ ಸ್ಥಾನದಲ್ಲಿದ್ದು ಬೇಜವಾಬ್ದರಿಯಿಂದ ವರ್ತಿಸುವುದನ್ನು ಸಹಿಸಲ್ಲ. ಈ ಸಂಬಂಧ ಇಬ್ಬರಿಗೂ ನೋಟಿಸ್ ನೀಡಲು ಸೂಚಿಸಿದ್ದೇನೆ ಎಂದು ಬೊಮ್ಮಾಯಿ ಹೇಳಿದ್ದಾರೆ.

ಇನ್ನು ಅಧಿಕಾರಿಗಳ ನಡುವಿನ ಕಿತ್ತಾಟದ ಕುರಿತು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದ್ದು, ಜನರು ಐಎಎಸ್, ಐಪಿಎಸ್ ಅಧಿಕಾರಿಗಳನ್ನು ದೇವ ಮಾನವರು ಅಂದುಕೊಂಡಿದ್ದಾರೆ. ಆದರೆ ಈ ಇಬ್ಬರು ಅಧಿಕಾರಿಗಳು ಬಹಳ ಕೆಟ್ಟದಾಗಿ ವರ್ತನೆ ಮಾಡುತ್ತಿದ್ದಾರೆ. ಇದರಿಂದ ನನಗೂ ನೋವಾಗಿದೆ. ವೈಯಕ್ತಿಕ ವಿಚಾರಗಳು ಏನೇ ಇದ್ದರೂ ಬೀದಿ ರಂಪಾಟ ಸಲ್ಲ. ಇವರಿಂದಾಗಿ ಎಲ್ಲ ಅಧಿಕಾರಿಗಳಿಗೂ ಮುಜುಗರ ಉಂಟಾಗುವಂತಾಗಿದೆ. ಮುಖ್ಯಮಂತ್ರಿಗಳು ಕಾನೂನಿನ ಚೌಕಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ.