ಮೊರ್ಬಿ ತೂಗು ಸೇತುವೆ ದುರಂತ – ಅರ್ಧದಷ್ಟು ತಂತಿಗಳು ತುಕ್ಕು ಹಿಡಿದಿದ್ದೇ ಕಾರಣ : ತನಿಖಾ ವರದಿಯಲ್ಲಿ ಬಯಲು…

58
firstsuddi

ಗಾಂಧಿನಗರ : ಕಳೆದ ವರ್ಷ ಅಕ್ಟೋಬರ್ 30 ರಂದು ಗುಜರಾತ್ ನ ಮೊರ್ಬಿ ತೂಗು ಸೇತುವೆ ಕುಸಿದು 135 ಜನರು ಮೃತಪಟ್ಟಿದ್ದರು. ಮೊರ್ಬಿ ಸೇತುವೆ ದುರಂತದ ತನಿಖೆಯನ್ನು ಗುಜರಾತ್ ಸರ್ಕಾರ ವಿಶೇಷ ತನಿಖಾ ತಂಡಕ್ಕೆ ವಹಿಸಿತ್ತು. ಇದೀಗ ಸೇತುವೆಯ ದುರಸ್ತಿ, ನಿರ್ವಹಣೆ ಮತ್ತು ಕಾರ್ಯಾಚರಣೆಯಲ್ಲಿ ಹಲವು ಲೋಪದೋಷಗಳನ್ನು ಎಸ್ ಐಟಿ ಪತ್ತೆ ಮಾಡಿದೆ.

ಮಚ್ಚು ನದಿಯ ಮೇಲೆ 1887ರಲ್ಲಿ ಆಗಿನ ಆಡಳಿತಗಾರರು ನಿರ್ಮಿಸಿದ್ದ ಸೇತುವೆಯ 2 ಮುಖ್ಯ ಕೇಬಲ್ಗಳಲ್ಲಿ ಒಂದು ಕೇಬಲ್ ನಲ್ಲಿ ತುಕ್ಕಿನ ಸಮಸ್ಯೆಯಿತ್ತು. ಅದರ ಅರ್ಧದಷ್ಟು ತಂತಿಗಳಿಗೆ ತುಕ್ಕು ಹಿಡಿದಿತ್ತು. ಇದು ಕಳೆದ ವರ್ಷ ಅಕ್ಟೋಬರ್ 30 ರಂದು ದುರಂತ ಸಂಭವಿಸಲು ಕಾರಣವಾಗಿರುವ ಸಾಧ್ಯತೆಯಿದೆ. ನದಿಯ ಮೇಲ್ಭಾಗದ ಮುಖ್ಯ ಕೇಬಲ್ ತುಂಡಾಗಿರುವುದೂ ದುರಂತಕ್ಕೆ ಕಾರಣ ಎಂದು ಎಸ್ಐಟಿ ತಿಳಿಸಿದೆ.

ಸೇತುವೆಯ ಪ್ರತಿಯೊಂದು ಕೇಬಲ್ ಅನ್ನು 7 ಎಳೆಗಳಿಂದ ರಚಿಸಲಾಗಿದ್ದು, ಅವು ಉಕ್ಕಿನ ತಂತಿಗಳಾಗಿವೆ. ಈ ಕೇಬಲ್ ಅನ್ನು ರೂಪಿಸಲು ಒಟ್ಟು 49 ತಂತಿಗಳನ್ನು 7 ಎಳೆಗಳಲ್ಲಿ ಒಟ್ಟಿಗೆ ಜೋಡಿಸಲಾಗಿದೆ. ಕೇಬಲ್ನ 49 ವೈರ್ ಗಳಲ್ಲಿ 22 ತುಕ್ಕು ಹಿಡಿದಿರುವುದು ಕಂಡುಬಂದಿದ್ದು, ಘಟನೆಗೂ ಮುನ್ನವೇ ಆ ತಂತಿಗಳು ತುಂಡಾಗಿರಬಹುದು ಎಂದು ಎಸ್ಐಟಿ ತನ್ನ ವರದಿಯಲ್ಲಿ ತಿಳಿಸಿದೆ.

ಸೇತುವೆಯ ಮೇಲೆ ಸುಮಾರು 300 ಜನರಿದ್ದರು, ಇದು ಸೇತುವೆಯ ಭಾರ ಹೊರುವ ಸಾಮರ್ಥ್ಯಕ್ಕಿಂತ ಹೆಚ್ಚಾದ ಕಾರಣ ಸೇತುವೆ ಕುಸಿದಿದೆ ಎಂದು ತಿಳಿಸಲಾಗಿದೆ.