ಡಿ.31 ರಂದು ಕರ್ನಾಟಕ ಬಂದ್​ಗೆ ಕರೆ ನೀಡಿದ ಕನ್ನಡಪರ ಸಂಘಟನೆಗಳು.

65
firstsuddi

ಬೆಂಗಳೂರು : ರಾಜ್ಯದಲ್ಲಿ ಎಂಇಎಸ್ ಸಂಘಟನೆಯನ್ನು ನಿಷೇಧ ಮಾಡುವಂತೆ ಒತ್ತಾಯಿಸಿ ಕನ್ನಡಪರ ಸಂಘಟನೆಗಳು ಇದೇ ಡಿಸೆಂಬರ್ 31 ರಂದು ಕರ್ನಾಟಕ ಬಂದ್ ಗೆ ಕರೆ ನೀಡಿವೆ.

ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಇಂದು ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಬೆಳಗ್ಗೆ 6 ರಿಂದ ಸಂಜೆ 6 ರ ವರೆಗೆ ಕರ್ನಾಟಕ ಬಂದ್ ಮಾಡಲಾಗುತ್ತೆ. ಇಲ್ಲಿ ಯಾವುದೇ ನೈತಿಕ ಬೆಂಬಲ ಅನ್ನೋದು ಬೇಡ. ಎಲ್ಲರೂ ಒಟ್ಟಾಗಿ ಕರ್ನಾಟಕ ಬಂದ್‌ ಗೆ ಬೆಂಬಲಿಸಬೇಕು. ತುರ್ತುಸೇವೆಗಳನ್ನು ಹೊರತುಪಡಿಸಿ ಎಲ್ಲ ಕಡೆ ಬಂದ್ ಆಗಬೇಕು. ಪಕ್ಷಾತೀತವಾಗಿ ಎಲ್ಲರೂ ಕರ್ನಾಟಕ ಬಂದ್ ಬೆಂಬಲಿಸಬೇಕು ಎಂದು ವಾಟಾಳ್ ನಾಗರಾಜ್ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಎಂಇಎಸ್ ನಿಷೇಧ ಮಾಡಲೇಬೇಕು. ಸಿಎಂ ಬೊಮ್ಮಾಯಿ ಕೂಡಲೇ ತೀರ್ಮಾನ ಮಾಡಬೇಕು. ಎಂಇಎಸ್ ನಿಷೇಧ ಮಾಡುವವರೆಗೆ ಹೋರಾಟ ನಿರಂತರ ಎಂದು ರಾಜ್ಯ ಸರ್ಕಾರಕ್ಕೆ ವಾಟಾಳ್ ನಾಗರಾಜ್ ಒತ್ತಾಯ ಮಾಡಿದ್ದಾರೆ. ಜೊತೆಗೆ ಡಿ.29ರವರಗೆ ಸರ್ಕಾರಕ್ಕೆ ಗಡವು ನೀಡಲಾಗಿದೆ. ಡಿ.29ರಂದು ಎಂಇಎಸ್ ನಿಷೇಧ ಮಾಡಿದ್ರೆ ಬಂದ್ ವಾಪಸ್ ತೆಗೆದುಕೊಳ್ಳುವುದಾಗಿ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.

ಇನ್ನು ಕರ್ನಾಟಕ ಬಂದ್‌ನಿಂದ ಹೊಸ ವರ್ಷಾಚರಣೆಗೆ ತೊಂದರೆಯಿಲ್ಲ. ಕರ್ನಾಟಕ ಬಂದ್ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಮಾತ್ರ. ಹೊಸ ವರ್ಷಾಚರಣೆ ಸಂಭ್ರಮಕ್ಕೆ ನಾವು ತೊಂದರೆ ಕೊಡಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ.