ಬೆಳಗಾವಿ: ತಂದೆ ಅನಾರೋಗ್ಯದಿಂದ ಮೃತಪಟ್ಟರೂ ವಿದೇಶದಲ್ಲಿ ವಾಸವಿರುವ ಮಗ ಮತ್ತು ಮಗಳು ಅಂತ್ಯಕ್ರಿಯೆಗೆ ಬಾರದೆ ಕೊನೆಗೆ ಚಿಕ್ಕೋಡಿ ಪೊಲೀಸರೇ ವೃದ್ಧನ ಅಂತ್ಯಕ್ರಿಯೆ ನೆರವೇರಿಸಿ ಮಾನವೀಯತೆ ಮರೆದಿರುವ ಘಟನೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಾಗರಮುನ್ನೋಳಿ ಗ್ರಾಮದಲ್ಲಿ ನಡೆದಿದೆ.
ಮಹಾರಾಷ್ಟ್ರದ ಪುಣೆ ಮೂಲದ ಮೂಲಚಂದ್ರ ಶರ್ಮಾ (72) ಮೃತ ವೃದ್ಧ. ಇವರು ಪಾರ್ಶ್ವವಾಯುವಿನಿಂದ ಬಳಲುತ್ತಿದ್ದರು. ಇವರ ಮಕ್ಕಳು ವಿದೇಶದಲ್ಲಿ ವಾಸವಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮೂಲಚಂದ್ರ ಶರ್ಮಾರನ್ನು ವ್ಯಕ್ತಿಯೊಬ್ಬರು ನಾಗರಮುನ್ನೋಳಿ ಕುಂಬಾರ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕೆರೆತಂದಿದ್ದರು. ಚಿಕಿತ್ಸೆ ನಂತರ ಆಸ್ಪತ್ರೆಗೆ ಹತ್ತಿರದಲ್ಲಿದ್ದ ಶಿವನೇರಿ ಲಾಡ್ಜ್ನಲ್ಲಿ ಮೂಲಚಂದ್ರ ಶರ್ಮಾ ಅವರನ್ನು ವ್ಯಕ್ತಿ ಇರಿಸಿದ್ದನು.
ಈ ವ್ಯಕ್ತಿ ಗುತ್ತಿಗೆ ಆಧಾರದಲ್ಲಿ ಮೂಲಚಂದ್ರ ಶರ್ಮಾರ ಆರೈಕೆ ಮಾಡುತ್ತಿದ್ದನು. ಇದೀಗ ತನ್ನ ಗುತ್ತಿಗೆ ವಾಯಿದೆ ಮುಗಿದ ಬಳಿಕ ಮೂಲಚಂದ್ರ ಶರ್ಮಾರನ್ನು ಲಾಡ್ಜ್ನಲ್ಲಿಯೇ ಬಿಟ್ಟು ತೆರಳಿದ್ದನು. ಬಳಿಕ ಲಾಡ್ಜ್ ಮ್ಯಾನೇಜರ್ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಪೊಲೀಸರು ಬಂದು ವೃದ್ಧನನ್ನು ವಿಚಾರಿಸಿದಾಗ ತಾನು ನಿವೃತ್ತ ಬ್ಯಾಂಕ್ ಮ್ಯಾನೇಜರ್, ತನ್ನ ಮಗ ದಕ್ಷಿಣ ಆಫ್ರಿಕಾ ಹಾಗೂ ಮಗಳು ಕೆನಡಾದಲ್ಲಿ ಉತ್ತಮ ಹುದ್ದೆಯಲ್ಲಿದ್ದಾರೆ ಎಂದು ಮೂಲಚಂದ್ರ ಶರ್ಮಾ ತಿಳಿಸಿದ್ದಾರೆ. ಬಳಿಕ ವಿದೇಶದಲ್ಲಿರುವ ವೃದ್ಧನ ಮಕ್ಕಳ ಫೋನ್ ನಂಬರ್ ಪಡೆದು ಪೊಲೀಸರು ನಿರಂತರವಾಗಿ ಸಂಪರ್ಕಕ್ಕೆ ಪ್ರಯತ್ನಿಸಿದ್ದಾರೆ. ಆದರೆ ಪೊಲೀಸರ ಕರೆಗೆ ಅವರಿಬ್ಬರೂ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.
ಬಳಿಕ ಮೂಲಚಂದ್ರ ಶರ್ಮಾರನ್ನು ಪೊಲೀಸರು ಚಿಕ್ಕೋಡಿ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದರು. ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿತ್ತು. 2 ದಿನಗಳ ಹಿಂದೆ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೂಲಚಂದ್ರ ಶರ್ಮಾ ಸಾವನ್ನಪ್ಪಿದ್ದಾರೆ. ಈ ವಿಷಯ ತಿಳಿಸಲು ವಿದೇಶದಲ್ಲಿರುವ ಅವರ ಮಗಳಿಗೆ ಕರೆ ಮಾಡಿದಾಗ ನಮಗೂ ಅವರಿಗೂ ಸಂಬಂಧ ಇಲ್ಲ ಎಂದು ಹೇಳಿ ಕರೆಯನ್ನು ಕಟ್ ಮಾಡಿದ್ದಾರೆ.
ಕೊನೆಗೆ ಚಿಕ್ಕೋಡಿ ಪೊಲೀಸರೇ ಮರಣೋತ್ತರ ಪರೀಕ್ಷೆ ಮಾಡಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಚಿಕ್ಕೋಡಿ ಪಿಎಸ್ಐ ಬಸಗೌಡ ನೇರ್ಲಿ, ನಾಗರಮುನ್ನೋಳಿ ಗ್ರಾಮ ಪಂಚಾಯಿತಿ ಸಿಬ್ಬಂದಿ ಸಮ್ಮುಖದಲ್ಲಿ ಅಂತ್ಯಕ್ರಿಯೆ ನೆರವೇರಿದೆ. ಪೊಲೀಸರ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಅಂತ್ಯಕ್ರಿಯೆಗೆ ಬಾರದ ಮಕ್ಕಳಿಗೆ ಹಿಡಿಶಾಪ ಹಾಕಿದ್ದಾರೆ.










