ತಿಂಡಿಗೆ ವಿಷ ಬೆರಸಿ ತಂದೆ-ತಾಯಿಯ ಕೊಲೆಗೈದ ಪಾಪಿ ಮಗ…

84
firstsuddi

ಹಾಸನ: ತಿಂಡಿಗೆ ವಿಷ ಬೆರೆಸಿ ತಂದೆ ಹಾಗೂ ತಾಯಿಯನ್ನು ಮಗನೇ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಅರಕಲಗೂಡು ತಾಲೂಕಿನ ಬಿಸಿಲಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮಂಜುನಾಥ್ (27) ವಿಷ ಬೆರಸಿ ತಂದೆ ತಾಯಿಯನ್ನು ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಉಮಾ(48), ನಂಜುಂಡಪ್ಪ(55) ಮೃತ ದುರ್ದೈವಿಗಳು.

ವಿಧವೆ ಒಬ್ಬಳ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಆರೋಪಿಗೆ ತಂದೆ-ತಾಯಿ ಬುದ್ಧಿವಾದ ಹೇಳಿದ್ದರು. ಅಲ್ಲದೇ ಸಹಕಾರ ಸಂಘಗಳಲ್ಲಿ ತಾಯಿ ಉಮಾ ಮಾಡಿದ್ದ ಸಾಲದ ಹಣವನ್ನು ಮಂಜುನಾಥ್ ದುರುಪಯೋಗ ಪಡಿಸಿಕೊಂಡಿದ್ದ. ಹಣ ನೀಡುವಂತೆ ಪದೇ ಪದೇ ಉಮಾ ಒತ್ತಾಯಿಸುತ್ತಿದ್ದರು. ಈ ಎರಡು ಕಾರಣಗಳಿಂದ ಕೋಪಗೊಂಡಿದ್ದ ಮಂಜುನಾಥ್, ಪಲಾವ್‍ನಲ್ಲಿ ವಿಷ ಬೆರೆಸಿ ತಂದೆ ಹಾಗೂ ತಾಯಿಯನ್ನು ಕೊಲೆಗೈದಿದ್ದಾನೆ ಎಂದು ತಿಳಿದು ಬಂದಿದೆ.

ಆರೋಪಿ ತಾಯಿಗಿಂತ ಮೊದಲೇ ಪಲಾವ್ ತಿಂದು ನಂತರ ಪಲಾವ್‍ಗೆ ಕಳೆನಾಶಕ ಬೆರೆಸಿದ್ದ. ತಂದೆ-ತಾಯಿ ತಿಂಡಿ ತಿಂದ ಬಳಿಕ ಆರೋಪಿ ಔಷಧಿ ವಾಸನೆ ಬರುತ್ತಿದೆ ಎಂದು ವಾಂತಿ ಮಾಡಿ ನಾಟಕವಾಡಿದ್ದ. ಬಳಿಕ ಚಿಕಿತ್ಸೆ ಕೊಡಿಸುವ ನೆಪದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವಾಪಸ್ ಕರೆತಂದಿದ್ದ. ಬಳಿಕ ತಾಯಿ ಉಮಾ ಹಾಗೂ ತಂದೆ ನಂಜುಂಡಪ್ಪ (55) ಹಠಾತ್ ಆಗಿ ಸಾವಿಗೀಡಾಗಿದ್ದರು.

ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ದಂಪತಿಯ ಕಿರಿಯ ಪುತ್ರ ಕೊಣನೂರು ಪೊಲೀಸರಿಗೆ ಮಾಹಿತಿ ನೀಡಿದ್ದ. ಬಳಿಕ ಪೊಲೀಸರು ಅಂತ್ಯಕ್ರಿಯೆ ತಡೆದು ಕುಟುಂಬ ಸದಸ್ಯರ ಮನವೊಲಿಸಿ ಮೃತದೇಹಗಳ ಮರಣೋತ್ತರ ಪರೀಕ್ಷೆ ಮಾಡಿಸಿದ್ದಾರೆ. ಬಳಿಕ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ಮಂಜುನಾಥ್​​ನನ್ನು ತನಿಖೆಗೆ ಒಳಪಡಿಸಿದ್ದರು. ಈ ವೇಳೆ ಆರೋಪಿ ಮಂಜುನಾಥ್ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಘಟನೆ ಸಂಬಂಧ ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.