ಬೆಂಗಳೂರು: ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ಅವರು ಮಲ್ಲೇಶ್ವರದ ಕೆಸಿ ಜನರಲ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ತಲೆಗೆ ಪೆಟ್ಟಾಗಿರುವುದರಿಂದ ಅಬ್ಸರ್‍ವೇಷನ್‍ನಲ್ಲಿ ಇರುವಂತೆ ವೈದ್ಯರು ಮುನಿರತ್ನ ಅವರಿಗೆ ಹೇಳಿದ್ದರು. ಮುನಿರತ್ನ ಬುಧವಾರದ ರಾತ್ರಿಯನ್ನು ಆಸ್ಪತ್ರೆಯಲ್ಲೇ ಕಳೆದಿದ್ದು, ಇಂದು ಬೆಳಗ್ಗೆ ಡಿಸ್ಚಾರ್ಜ್ ಆಗಿದ್ದಾರೆ. ಈ ಸಂದರ್ಭದಲ್ಲಿ ಸುದ್ದಿಗಾರರು ಪ್ರಶ್ನೆ ಕೇಳಿದ್ದಕ್ಕೆ ಈಗ ನಾನು ಏನನ್ನು ಹೇಳುವುದಿಲ್ಲ. ಇಂದು ಬೆಳಗ್ಗೆ 11 ಗಂಟೆಗೆ ಮಾಧ್ಯಮಗೋಷ್ಠಿ ನಡೆಸಿ ಎಲ್ಲವನ್ನೂ ಹೇಳುತ್ತೇನೆ ಎಂದು ತಿಳಿಸಿದರು. ಲಗ್ಗೆರೆ ವಾರ್ಡ್‍ನಲ್ಲಿರುವ ಲಕ್ಷ್ಮಿ ದೇವಿ ನಗರದಲ್ಲಿ ವಾಜಪೇಯಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ನಂತರ ವಾಪಸ್ ಕಾರಿನತ್ತ ನಡೆದುಕೊಂಡು ಹೋಗುತ್ತಿದ್ದಾಗ ಮುನಿರತ್ನ ಅವರ ಮೇಲೆ ಮೊಟ್ಟೆ ದಾಳಿ ಮಾಡಲಾಗಿತ್ತು. ಕೂಡಲೇ ದಾಳಿಕೋರರನ್ನು ಮುನಿರತ್ನ ಬೆಂಬಲಿಗರು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ. ಈ ದಾಳಿಯ ಹಿಂದೆ ಮಾಜಿ ಸಂಸದ ಡಿ.ಕೆ ಸುರೇಶ್, ಡಿಸಿಎಂ ಡಿ.ಕೆ ಶಿವಕುಮಾರ್, ಹನುಮಂತರಾಯಪ್ಪ, ಮತ್ತು ಕುಸುಮಾ ಇದ್ದಾರೆ ಎಂದು ಮುನಿರತ್ನ ಅವರು ತಿಳಿಸಿದರು. ಪೊಲೀಸರು ಇಲ್ಲದಿದ್ರೆ ನನ್ನ ಕೊಲೆ ಆಗುತ್ತಿತ್ತು. ನೀವು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಕುಸುಮಾ ಶಾಸಕಿ ಆಗಬೇಕು ಎಂದು ಇತ್ತೀಚಿಗಷ್ಟೇ ಕೆಲವರು ಬೆದರಿಕೆ ಹಾಕಿದ್ದಾರೆ ಎಂದು ಮುನಿರತ್ನ ಆರೋಪಿಸಿದ್ದಾರೆ.










