ನವದೆಹಲಿ: 2023-24ನೇ ಹಣಕಾಸು ವರ್ಷದಲ್ಲಿ ಬಿಜೆಪಿ ತನ್ನ ವ್ಯಕ್ತಿಗಳು, ಘಟಕಗಳು, ಟ್ರಸ್ಟ್ ಮತ್ತು ಕಾರ್ಪೊರೇಟ್ ಕಂಪನಿಗಳಿಂದ 20 ಸಾವಿರ ರೂಪಾಯಿಗಿಂತ ಅಧಿಕ ಮೊತ್ತದ ಒಟ್ಟು 2,244 ಕೋಟಿ ರೂ. ದೇಣಿಗೆ ಸ್ವೀಕರಿಸಿದೆ. ಹಾಗೂ ಕಾಂಗ್ರೆಸ್ 289 ಕೋಟಿ ರೂ. ದೇಣಿಗೆ ಸ್ವೀಕರಿಸಿದೆ. ಭಾರತೀಯ ಚುನಾವಣಾ ಆಯೋಗ ತನ್ನ ವೆಬ್‍ಸೈಟ್‍ನಲ್ಲಿ ಪಕ್ಷಗಳು ನೀಡಿದ ವರದಿಯನ್ನು ಅಪ್ಲೋಡ್ ಮಾಡಲಾಗಿದೆ. 2022-23 ರ ಹಣಕಾಸು ವರ್ಷದಲ್ಲಿ ಬಿಜೆಪಿ 719.85 ಕೋಟಿ ರೂಪಾಯಿ ದೇಣಿಗೆ ಸ್ವೀಕರಿಸಿತ್ತು. ಹಾಗೂ ಕಾಂಗ್ರೆಸ್ 79.92 ಕೋಟಿ ರೂಪಾಯಿ ಸ್ವೀಕರಿಸಿತ್ತು. ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ಬಿಜೆಪಿಗೆ ಸಿಕ್ಕಿದ ದೇಣಿಗೆ ಪ್ರಮಾಣ 212% ರಷ್ಟು ಏರಿಕೆಯಾಗಿದೆ. ಚುನಾವಣಾ ಆಯೋಗದ ವೆಬ್‍ಸೈಟ್‍ನಲ್ಲಿ ಲಭ್ಯವಾಗಿರುವ ದೇಣಿಗೆಯ ಮಾಹಿತಿ ಪ್ರಕಾರ, ಬಿಜೆಪಿ 2023-24ನೇ ಹಣಕಾಸು ವರ್ಷದಲ್ಲಿ ಪ್ರುಡೆಂಟ್ ಎಲೆಕ್ಟೊರಲ್ ಟ್ರಸ್ಟ್‍ನಿಂದ 723.6 ಕೋಟಿ ರೂಪಾಯಿ ದೇಣಿಗೆ ಪಡೆದಿದೆ. ಈ ಟ್ರಸ್ಟ್ ಕಾಂಗ್ರೆಸ್ ಪಕ್ಷಕ್ಕೆ 156.4 ಕೋಟಿ ರೂಪಾಯಿ ದೇಣಿಗೆ ನೀಡಿದೆ ಎಂದು ಮಾಹಿತಿ ಲಭ್ಯವಾಗಿದೆ. ಅಂದರೆ ಬಿಜೆಪಿ ಪಡೆದ ಒಟ್ಟು ದೇಣಿಗೆಯ ಮೂರನೇ ಒಂದರಷ್ಟು ಭಾಗ ಮತ್ತು ಕಾಂಗ್ರೆಸ್ ದೇಣಿಗೆಯ ಅರ್ಧದಷ್ಟು ಭಾಗ ಈ ಟ್ರಸ್ಟ್‍ನಿಂದ ಬಂದಿದೆ ಎಂದು ವರದಿ ತಿಳಿದುಬಂದಿದೆ. 2024ರ ಫೆಬ್ರವರಿಯಲ್ಲಿ ಚುನಾವಣಾ ಬಾಂಡ್ ಯೋಜನೆಯನ್ನು ಸುಪ್ರೀಂಕೋರ್ಟ್ ರದ್ದುಪಡಿಸಿದ್ದು, ರಾಜಕೀಯ ಪಕ್ಷಗಳು ದೇಣಿಗೆಯನ್ನು ನೇರವಾಗಿ ಅಥವಾ ಚುನಾವಣಾ ಟ್ರಸ್ಟ್ ಮಾರ್ಗದ ಮುಖಾಂತರ ಸ್ವೀಕರಿಸಬೇಕು ಎಂದು ಸೂಚಿಸಲಾಗಿತ್ತು.










