ಬೆಂಗಳೂರು: ತಾಯಿಯನ್ನು ಕೊಂದು ಸೂಟ್‌ಕೇಸ್‌ನಲ್ಲಿ ಶವ ಹೊತ್ತುಕೊಂಡು ಮಗಳು ಮೈಕೋಲೇಔಟ್ ಪೊಲೀಸ್ ಠಾಣೆಗೆ ಬಂದು ಆತಂಕ ಸೃಷ್ಟಿಸಿರುವ ಘಟನೆ ನಗರದಲ್ಲಿ ನಡೆದಿದೆ.
ಸೆನಾಲಿ ಸೇನ್ (39) ಹೆತ್ತ ತಾಯಿಯನ್ನು ಕೊಲೆ ಮಾಡಿದ ಆರೋಪಿ. 70 ವರ್ಷದ ಬೀವಾ ಪಾಲ್ ಕೊಲೆಯಾದ ವೃದ್ಧೆ.
ಸೋನಾಲಿ ಸೇನ್ ಕುಟುಂಬ ಕೊಲ್ಕತ್ತಾ ಮೂಲದವರಾಗಿದ್ದು, ಕಳೆದ 6 ವರ್ಷಗಳಿಂದ ನಗರದ ಬಿಳೆಕಳ್ಳಿಯ ಎನ್ಎಸ್ ಆರ್ ಗ್ರೀನ್ ಅಪಾರ್ಟ್ಮೆಂಟ್ನ 106 ಫ್ಲಾಟ್ನಲ್ಲಿ ವಾಸವಾಗಿದ್ದರು. ಫ್ಲಾಟ್ನಲ್ಲಿ ಸೆನಾಲಿ ಸೇನ್, ಸೆನಾಲಿ ಸೇನ್ ಪತಿ, ಮಗ, ಅತ್ತೆ ಮತ್ತು ಸೆನಾಲಿ ಸೇನ್ ತಾಯಿ ವಾಸವಾಗಿದ್ದರು. ಸೆನಾಲಿ ಸೇನ್ ಅಮ್ಮ ಮತ್ತು ಅತ್ತೆ ಒಂದೇ ಮನೆಯಲ್ಲಿದ್ದರು. ಇಬ್ಬರೂ ದಿನಾ ಗಲಾಟೆ ಮಾಡಿಕೊಳ್ಳುತ್ತಿದ್ದರು. ಬೀಗರ ಜಗಳಕ್ಕೆ ಬೇಸತ್ತಿದ್ದ ಆಕೆಯ ತಾಯಿ ಬೀವಾ ಪಾಲ್ ನಿದ್ರೆ ಮಾತ್ರೆ ನುಂಗಿ ಸಾಯೋದಾಗಿ ಹೇಳಿದ್ದಾರೆ. ಬೆದರಿಕೆಯಂತೆಯೇ ಮುಂಜಾನೆ ಸೆನಾಲಿ ಸೇನ್ ತನ್ನ ತಾಯಿಗೆ 20 ನಿದ್ರೆ ಮಾತ್ರೆ ನುಂಗಿಸಿದ್ದಾಳೆ.
ತಾಯಿ ಹೊಟ್ಟೆ ನೋವು ಎಂದಾಗ ವೇಲ್‌ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾಳೆ. ಟ್ರ್ಯಾಲಿ ಸೂಟ್‌ಕೇಸ್‌ನಲ್ಲಿ ತಾಯಿ ಶವವಿಟ್ಟು, ತಂದೆಯ ಫೋಟೊ ಇಟ್ಟು ಮಗಳು ಸ್ಟೇಷನ್‌ಗೆ ಬಂದಿದ್ದಾಳೆ. ಇದನ್ನು ಕಂಡು ಪೊಲೀಸರೇ ದಂಗಾಗಿದ್ದಾರೆ.
ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿ ಸೆನಾಲಿ ಸೇನ್‌ಳನ್ನು ಬಂಧಿಸಿದ್ದಾರೆ.










