ಬೆಂಗಳೂರು: ತಾಯಿ ಮೃತಪಟ್ಟಿದ್ದಾಳೆ ಎಂಬ ಅರಿವು ಇಲ್ಲದೆ 11 ವರ್ಷದ ಬಾಲಕನೋರ್ವ ಎರಡು ದಿನಗಳ ಕಾಲ ತಾಯಿಯ ಮೃತದೇಹದ ಪಕ್ಕದಲ್ಲೇ ಸಮಯ ಕಳೆದಿರುವ ಘಟನೆ ಬೆಂಗಳೂರಿನ ಗಂಗಾ ನಗರದಲ್ಲಿ ನಡೆದಿದೆ.
ಗಂಗಾನಗರದಲ್ಲಿ ವಾಸವಾಗಿದ್ದ 40 ವರ್ಷದ ಅಣ್ಣಮ್ಮ ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದರು. ಫೆ.25ರಂದು
ಮಲಗಿದ್ದ ಸ್ಥಿತಿಯಲ್ಲೇ ಸಾವನ್ನಪ್ಪಿದ್ದರು. ಆದರೆ ಈ ಬಗ್ಗೆ ತಿಳಿಯದ ಆಕೆಯ ಮಗ ತಾಯಿಯ ಮೃತದೇಹದೊಂದಿಗೆ ಸಮಯ ಕಳೆದಿದ್ದಾನೆ. ಇನ್ನು ತಾಯಿ ಮಲಗಿದ್ದಾಳೆ ಎಂದು ತಿಳಿದುಕೊಂಡಿದ್ದ ಮಗ, ಅಕ್ಕಪಕ್ಕದ ಮನೆಯವರ ಬಳಿ ಹೋಗಿ ಅಮ್ಮ ಮನೆಯಲ್ಲಿ ಮಲಗಿದ್ದಾಳೆ ಅಡುಗೆ ಏನು ಮಾಡಿಲ್ಲ ಅಂತಾ ಊಟ ಮಾಡಿಕೊಂಡು ಬಂದು ಮತ್ತೆ ಅಮ್ಮನ ಮೃತದೇಹದ ಪಕ್ಕದಲ್ಲೇ ಮಲಗಿಕೊಳ್ಳುತ್ತಿದ್ದನಂತೆ.
ಫೆ.28ರಂದು ಮೃತದೇಹದಿಂದ ದುರ್ವಾಸನೆ ಬರಲು ಶುರುವಾಗಿದೆ. ಈ ಬಗ್ಗೆ ಬಾಲಕ ಅಕ್ಕಪಕ್ಕದ ಮನೆಯವರಿಗೆ ತಿಳಿಸಿದ್ದಾನೆ. ಪರಿಶೀಲಿಸಿದಾಗ ಮಹಿಳೆ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಇನ್ನು ಪರಿಶೀಲನೆ ನಡೆಸಿದ ಬಳಿಕ ಅಣ್ಣಮ್ಮ ಅವರದ್ದು ಸಹಜ ಸಾವಿನಂತೆ ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಮೃತ ಮಹಿಳೆಯ ಸಂಬಂಧಿಗಳಿಗೆ ಮಾಹಿತಿ ನೀಡಲಾಗಿದ್ದು, ಕಾನೂನಿನ ಅನ್ವಯ ಮುಂದಿನ ಕ್ರಮಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.










