ತಾರಕಕ್ಕೇರಿದ ಗಡಿ ವಿವಾದ – ಮಹಾರಾಷ್ಟ್ರ ಬಸ್ ಸಂಚಾರ ಸ್ಥಗಿತ…

59
firstsuddi

ಬೆಳಗಾವಿ : ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ತಾರಕಕ್ಕೇರುತ್ತಿದ್ದಂತೆ ಮಹಾರಾಷ್ಟ್ರ ರಾಜ್ಯ ಸಾರಿಗೆ ನಿಗಮ ಕರ್ನಾಟಕಕ್ಕೆ ಬಸ್ ಸಂಚಾರವನ್ನು ಸ್ಥಗಿತಗೊಳಿಸಿದೆ.

ಬೆಳಗಾವಿ ಮತ್ತು ಗಡಿಭಾಗದಲ್ಲಿ ಕನ್ನಡಪರ ಸಂಘಟನೆಗಳ ಪ್ರತಿಭಟನೆ ತೀವ್ರವಾಗಿರುವುದರಿಂದ ಮಹಾರಾಷ್ಟ್ರದ ಬಸ್ಸುಗಳ ಮೇಲೆ ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಪೊಲೀಸರು ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಇಂದು ಈ ತೀರ್ಮಾನ ಕೈಗೊಂಡಿದೆ.

ಪೊಲೀಸರಿಂದ ಸಂಚಾರಕ್ಕೆ ಅನುಮತಿ ಸಿಕ್ಕಿದ ನಂತರ ಕರ್ನಾಟಕಕ್ಕೆ ಬಸ್ಸು ಸಂಚಾರ ಸೇವೆ ಆರಂಭಿಸಲಾಗುವುದು. ಪ್ರಯಾಣಿಕರ ಮತ್ತು ಬಸ್ಸುಗಳ ಸುರಕ್ಷತೆ ನಮಗೆ ಮುಖ್ಯವಾಗಿದೆ ಎಂದು ಮಹಾರಾಷ್ಟ್ರ ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಸುಪ್ರೀಂಕೋರ್ಟ್ ಅಂಗಳದಲ್ಲಿದೆ. ಮತ್ತೊಂದೆಡೆ ಸಿಎಂ ಏಕನಾಥ್ ಶಿಂಧೆ, ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ದೂರವಾಣಿ ಕರೆ ಮಾಡಿ ಶಾಂತಿ ಮತ್ತು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಮನವಿ ಮಾಡಿದ್ದಾರೆ.

ಇದರ ನಡುವೆಯೂ ಬೆಳಗಾವಿಯಲ್ಲಿ ಕನ್ನಡಿಗರ ಆಕ್ರೋಶದ ಕಿಚ್ಚು ಹೆಚ್ಚಾಗುತ್ತಲೇ ಇದೆ. ಇಂದು ಕೂಡ ಕರವೇ ಕಾರ್ಯಕರ್ತರು ಪ್ರತಿಭಟನೆಗೆ ಕರೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಮಹಾರಾಷ್ಟ್ರದ ಪುಣೆಯಲ್ಲೂ ಮಹಾರಾಷ್ಟ್ರ ನವನಿರ್ಮಾಣ ಸೇನೆ ಕಾರ್ಯಕರ್ತರು ಕೆಎಸ್ ಆರ್ ಟಿಸಿ ಬಸ್ ಗೆ ಮಸಿ ಬಳೆಯುವ ಮೂಲಕ ಪುಂಡಾಟ ಮೆರೆದಿದ್ದಾರೆ. ಈ ಗಡಿ ಕಿಚ್ಚು ಇಂದು ಮತ್ತಷ್ಟು ಉದ್ವಿಗ್ನ ಪರಿಸ್ಥಿತಿಯನ್ನು ಉಂಟು ಮಾಡುವ ಸಾಧ್ಯತೆ ಇದೆ.