ದೆಹಲಿಗೆ ದಟ್ಟ ಮಂಜಿನ ಹೊದಿಕೆ: ವಿಮಾನಗಳ ಹಾರಾಟಕ್ಕೆ ಅಡ್ಡಿ.

24

ನವದೆಹಲಿ: ರಾಷ್ಟ್ರ ರಾಜಧಾನಿಗೆ ದಟ್ಟ ಮಂಜಿನ ಹೊದಿಕೆ ಆವರಿಸಿದ್ದು, ವಿವಿಧ ನಗರಗಳಲ್ಲಿ ವಿಮಾನ ಸಂಚಾರ ಮತ್ತು ರೈಲು ಸಂಚಾರದಲ್ಲಿ ತಡೆಯಾಗಿದೆ. ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ, ಗೋಚರತೆ ಶೂನ್ಯಕ್ಕೆ ಇಳಿದಿದ್ದರಿಂದ 202 ವಿಮಾನಗಳ ಹಾರಾಟದಲ್ಲಿ ತಡವಾಗಿದೆ. ಭಾರತೀಯ ಹವಾಮಾನ ಇಲಾಖೆ ವರದಿಯ ಪ್ರಕಾರ, ದೆಹಲಿಯಲ್ಲಿ 16 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ಇದ್ದು, ಸಾಮಾನ್ಯಕ್ಕಿಂತ 3 ಡಿಗ್ರಿಗಳಷ್ಟು ಇಳಕೆಯಾಗಿದೆ. ಕನಿಷ್ಠ ತಾಪಮಾನ 7.6 ಡಿಗ್ರಿ ಸೆಲ್ಸಿಯಸ್ ಇದೆ. ಪ್ರತಿಕೂಲ ಹವಾಮಾನದಿಂದಾಗಿ ಅಮೃತಸರ ಮತ್ತು ಗುವಾಹಟಿಗೆ ಬರುವ ಮತ್ತು ಹೋಗುವ ಎಲ್ಲಾ ವಿಮಾನಗಳ ಸಂಚಾರದಲ್ಲಿ ತಡೆಯಾಗಿದೆ ಎಂದು ಸ್ಪೈಸ್‍ಜೆಟ್ ತಿಳಿಸಿದೆ. ದೆಹಲಿ, ಅಮೃತಸರ, ಲಕ್ನೋ, ಬೆಂಗಳೂರು ಮತ್ತು ಗುವಾಹಟಿ ಮಾರ್ಗಗಳ ಸಂಚಾರದಲ್ಲಿ ಅಡ್ಡಿಯಾಗಿದೆ ಎಂದು ಇಂಡಿಗೋ ಹೇಳಿದೆ. ಹವಾಮಾನ ಇದೇ ರೀತಿ ಮುಂದುವರಿದರೆ ಕಡಿಮೆ ಗೋಚರತೆಯಿಂದಾಗಿ ವಿಮಾನಗಳು ರದ್ದಾಗಬಹುದು ಎಂದು ವಿಮಾನಯಾನ ಸಂಸ್ಥೆಗಳು ತಿಳಿಸಿದ್ದಾರೆ. ಹವಾಮಾನ ಸಂಬಂಧಿತ ಪರಿಸ್ಥಿತಿಗಳಿಂದಾಗಿ ದೆಹಲಿಯಿಂದ ಹೊರಡುವ ಕನಿಷ್ಠ 24 ರೈಲುಗಳು ತಡವಾಗಿದೆ. ಅಯೋಧ್ಯೆ ಎಕ್ಸ್ ಪ್ರೆಸ್ 4 ಗಂಟೆ ವಿಳಂಬವಾದರೆ, ಗೊರಖ್‍ಧಾಮ್ ಎಕ್ಸ್ ಪ್ರೆಸ್ 2 ಮತ್ತು ಬಿಹಾರ್ ಕ್ರಾಂತಿ ಎಕ್ಸ್‍ಪ್ರೆಸ್ ಹಾಗೂ ಶ್ರಮ್ ಶಕ್ತಿ ಎಕ್ಸ್ ಪ್ರೆಸ್ 3 ಗಂಟೆ ವಿಳಂಬವಾಗಿ ಪ್ರಯಾಣ ಬೆಳೆಸಿದೆ.