ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಸ್ ಮಾಡಿಸುವ ಭರವಸೆ ನೀಡಿ ಹಣ ವಸೂಲಿ.

23

ಬೆಂಗಳೂರು: ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳಿಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳನ್ನು ಪಾಸ್ ಮಾಡಿಸುವುದಾಗಿ ನಂಬಿಸಿ ವಂಚಿಸುತ್ತಿದ್ದ ಪ್ರಕರಣದ ಮತ್ತೇ 2 ಮಂದಿ ಆರೋಪಿಗಳನ್ನು ವಿಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಿಜಯಪುರದ ಬಿರಾದಾರ್ ಹಾಗೂ ತುಮಕೂರಿನ ಹನುಮಂತಪ್ಪ ಬಂಧಿತರು. ಈಗಾಗಲೇ ಅರೆಸ್ಟ್ ಆಗಿರುವ ಆರೋಪಿ ಗೋವಿಂದರಾಜು ಜೊತೆ ಸಂಪರ್ಕದಲ್ಲಿದ್ದ ಇವರು, ರಾಜ್ಯದ ವಿವಿಧೆಡೆ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳನ್ನು ಗೋವಿಂದರಾಜುಗೆ ಪರಿಚಯಿಸುತ್ತಿದ್ದರು ಎಂದು ತಿಳಿಸಲಾಗಿದೆ. ವಿಜಯನಗರ ಠಾಣೆ ಪೊಲೀಸರು ಗೋವಿಂದರಾಜುನನ್ನು ಬಂಧಿಸಿದ್ದರು. ಮೆಜೆಸ್ಟಿಕ್‍ನಲ್ಲಿರುವ ಸೌತ್ ವೆಸ್ಟರ್ನ್ ರೈಲ್ವೆಯಲ್ಲಿ ಚೀಫ್ ಟಿಕೆಟ್ ಇನ್ಸ್‍ಪೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಈತ, ಅಭ್ಯರ್ಥಿಗಳನ್ನು ಸಂಪರ್ಕಿಸಿ, ನನಗೆ ಪರೀಕ್ಷೆಗೆ ಸಂಬಂಧಿಸಿದ ಕೆಲವು ಅಧಿಕಾರಿಗಳ ಪರಿಚಯವಿದ್ದಾರೆ. ನಿಮ್ಮನ್ನ ಪಾಸ್ ಮಾಡಿಸಿ ಹುದ್ದೆ ಕೊಡಿಸುವೆ ಎಂದು ನಂಬಿಸುತ್ತಿದ್ದ. ಕೆಎಎಸ್ ಪ್ರಿಲಿಮ್ಸ್ ಪರೀಕ್ಷೆ ಪಾಸ್ ಮಾಡಿಸಲು 50 ಲಕ್ಷ ರೂಪಾಯಿ ಹಾಗೂ ಪಿಡಿಒ ಹುದ್ದೆಗೆ 25 ಲಕ್ಷ ರೂಪಾಯಿಗೆ ಮಾತನಾಡಿಕೊಂಡಿದ್ದ ಎಂದು ಪ್ರಾಥಮಿಕ ವಿಚಾರಣೆಯಿಂದ ತಿಳಿಸಲಾಗಿದೆ.