ದೇಶದ ಸಂವಿಧಾನ ಯಥಾವತ್ತಾಗಿ ಜಾರಿಯಾಗಬೇಕಾದರೆ ಕೆಳ ವರ್ಗದ ಜನ ವಿವೇಚನೆಯಿಂದ ಮತದಾನ ಮಾಡಬೇಕು: ಕೆ.ಬಿ ಸುಧಾ

150
firstsuddi

ಚಿಕ್ಕಮಗಳೂರು: ದೇಶದ ಸಂವಿಧಾನ ಯಥಾವತ್ತಾಗಿ ಜಾರಿಯಾಗಬೇಕಾದರೆ ಕೆಳ ವರ್ಗದ ಜನ ವಿವೇಚನೆಯಿಂದ ಮತದಾನ ಮಾಡಬೇಕು ಎಂದು ಬಿಎಸ್ ಪಿ ರಾಜ್ಯ ಕಾರ್ಯದರ್ಶಿ ಕೆ.ಬಿ ಸುಧಾ ಹೇಳಿದರು.

ನಗರದ ಬಿ ಎಸ್ ಪಿ ಕಚೇರಿಯಲ್ಲಿ ನಿನ್ನೆ ಏರ್ಪಡಿಸಿದ್ದ ಸಂವಿಧಾನ ಸಮರ್ಪಣಾ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಡಾ ಬಿ.ಆರ್ ಅಂಬೇಡ್ಕರ್ ಅವರು ಎರಡು ವರ್ಷ 11 ತಿಂಗಳು 18 ದಿನಗಳ ಕಾಲ ಶ್ರಮಿಸಿ ದೇಶಕ್ಕೆ ಇಡೀ ಪ್ರಪಂಚವೇ ಒಪ್ಪುವಂತಹ ಸಂವಿಧಾನವನ್ನು ನೀಡಿದ್ದಾರೆ. ಅದರಲ್ಲಿ ಸರ್ವರಿಗೂ ಸಮಪಾಲು ಸರ್ವರಿಗೂ ಸಮ ಬಾಳು ಅಡಕವಾಗಿದೆ ಇದುವರೆಗೆ ಅಧಿಕಾರ ನಡೆಸಿದ ಎಲ್ಲಾ ಪಕ್ಷಗಳೂ ಸಂವಿಧಾನವನ್ನು ಇಡಿಯಾಗಿ ಜಾರಿ ಮಾಡದೆ ಹರಿದು ಹಂಚಿದ್ದಾರೆ ಇದಕ್ಕೆ ಮೂಲ ಕಾರಣ ಕೆಳ ವರ್ಗದ ಜನ ಮತವನ್ನು ಮಾರಿಕೊಳ್ಳುತ್ತಿರುವುದು ಎಂದು ವಿಷಾದಿಸಿದರು.

ಮತದಾನದ ಹಕ್ಕನ್ನು ವಿವೇಚನೆಯಿಂದ ಬಳಸಬೇಕು ಅದನ್ನು ಮಾರಿಕೊಳ್ಳಬಾರದು ಒಂದೊಮ್ಮೆ ಮಾರಿಕೊಂಡರೆ ಸಂವಿಧಾನದ ಶತ್ರುಗಳು ಅಧಿಕಾರಕ್ಕೆ ಬರುತ್ತಾರೆ ಎಂದು ಅಂಬೇಡ್ಕರ್ ಅವರು ಸಂವಿಧಾನವನ್ನು ಬರೆದಾಗಲೇ ಎಚ್ಚರಿಸಿದ್ದರು ಅದನ್ನು ಮರೆತು ಮತವನ್ನು ಮಾರಿಕೊಳ್ಳುತ್ತಿರುವುದರಿಂದಾಗಿ ಸಂವಿಧಾನ ಇಡಿಯಾಗಿ ಜಾರಿಯಾಗುತ್ತಿಲ್ಲ ಸರ್ವರಿಗೂ ಸಮಪಾಲು ಸಮ ಬಾಳು ದೊರೆಯುತ್ತಿಲ್ಲ ರಾಷ್ಟ್ರದಲ್ಲಿ ಕೊಲೆ ಸುಲಿಗೆ ಅತ್ಯಾಚಾರ ದೌರ್ಜನ್ಯ ಶೋಷಣೆ ನಿರಂತರವಾಗಿವೆ ಎಂದು ಹೇಳಿದರು.

ಕೆಳ ವರ್ಗದ ಜನ ಈಗಲಾದರೂ ಎಚ್ಚೆತ್ತು ವಿವೇಚನೆಯಿಂದ ಮತದಾನ ಮಾಡಬೇಕು ಎಂದು ಕಿವಿ ಮಾತು ಹೇಳಿದರು.
ಬಿಎಸ್ ಪಿ ಜಿಲ್ಲಾಧ್ಯಕ್ಷ ಕೆ.ಟಿ. ರಾಧಾಕೃಷ್ಣ ಮಾತನಾಡಿ ದೇಶದ ಪ್ರತಿಯೊಬ್ಬರೂ ಅಂಬೇಡ್ಕರ್ ಮತ್ತು ಅವರ ಸಂವಿಧಾನದ  ಫಲಾನುಭವಿಗಳಾದ ನಾವು ಅಂಬೇಡ್ಕರ್ ಮತ್ತು ಸಂವಿಧಾನದ ಅನುಯಾಯಿಗಳಾಗಬೇಕಿತ್ತು ಹಾಗಾಗದ ಕಾರಣ ಸಂವಿಧಾನವನ್ನು ಸಂರಕ್ಷಿಸುವ, ಕಾಪಾಡಿಕೊಳ್ಳುವ ದುಸ್ತಿತಿ ಇಂದು ಎದುರಾಗಿದೆ ಎಂದರು.

ಕೆಳವರ್ಗದ ಜನ ಇನ್ನಾದರೂ ಅಂಬೇಡ್ಕರ್ ಅವರ ಅನುಯಾಯಿಗಳಾಗಬೇಕು ಸಂವಿಧಾನವನ್ನು ರಕ್ಷಿಸುವ ನಿಟ್ಟಿನಲ್ಲಿ ತಮ್ಮವರಿಗೇ ಮತ ನೀಡಬೇಕು ಎಂದು ಸಲಹೆ ಮಾಡಿದರು.

ಆಸೆಂಬ್ಲಿ ಸಂಯೋಜಕ ಕೆಆರ್ ಗಂಗಾಧರ್ ಮಾತನಾಡಿ ಅಂಬೇಡ್ಕರ್ ಹಾಗೂ ಅವರ ಸಂವಿಧಾನ ಇಲ್ಲದಿದ್ದರೆ ಕೆಳ ವರ್ಗದ ಜನ ಮಹಿಳೆಯರು ಗೌರವದಿಂದ ಬದುಕಲು ಸಾಧ್ಯವಾಗುತ್ತಿರಲಿಲ್ಲ ಎಂದು ತಿಳಿಸಿದರು.

ಸಂವಿಧಾನ ಸಮರ್ಪಣಾ ದಿನದ ಪ್ರಯುಕ್ತ ಸಮಾರಂಭದಲ್ಲಿ ಸಂವಿಧಾನ ಶಿಲ್ಪಿಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಸಂವಿಧಾನವನ್ನು ರಕ್ಷಿಸುವ ಕುರಿತು ಪ್ರತಿಜ್ಞಾವಿಧಿ ಕೈಗೊಳ್ಳಲಾಯಿತು. ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು.

ಅಸೆಂಬ್ಲಿ ಉಪಾಧ್ಯಕ್ಷ ಹೊನ್ನಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಪಾಧ್ಯಕ್ಷೆ ಕೆ ಎಸ್ ಮಂಜುಳಾ ಪಕ್ಷದ ಪದಾಧಿಕಾರಿಗಳಾದ ನವೀನ್ ಕುಮಾರ್ ವಸಂತ್ ಸಿದ್ದಯ್ಯ ರತ್ನ ಕಲಾವತಿ ರುಕ್ಮಿಣಿ ನವೀನ್ ಕುಮಾರಿ ಉಪಸ್ಥಿತರಿದ್ದರು.