ಬೆಂಗಳೂರು : ಸ್ಯಾಂಡಲ್ವುಡ್ ನಟಿ ಆರೋಹಿತ ಆಮ್ ಆದ್ಮಿ ಪಕ್ಷಕ್ಕೆ ಇಂದು ಸೇರ್ಪಡೆಯಾಗಿದ್ದಾರೆ. ಎಎಪಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಅವರು ನಟಿ ಆರೋಹಿತರನ್ನ ಸ್ವಾಗತಿಸಿದ್ದಾರೆ.
ಬೆಂಗಳೂರಿನ ವಸಂತನಗರದ ನಿವಾಸಿಯಾಗಿರುವ ಆರೋಹಿತ ಅಲಿಯಾಸ್ ಪ್ರಿಯಾಂಕ ಬಿ.ಕಾಂ ಪದವೀಧರರು. ಕರಾಟೆ ಪಟುವಾಗಿರುವ ಇವರು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. ಆಟಗಾರ, ರಾಜರಾಜೇಂದ್ರ, ಜಗ್ಗಿ, ಕಿರಿಕ್ ಪಾರ್ಟಿ, ಗೌಡ್ರು ಹೋಟೆಲ್, ಆಯುಷ್ಮಾನ್ ಭವ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ರಾಜಕೀಯ ರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಎಎಪಿ ಸೇರ್ಪಡೆ ಕುರಿತು ಮಾತನಾಡಿದ ನಟಿ ಆರೋಹಿತ, ಕರ್ನಾಟಕ ಹಾಗೂ ದೇಶದೆಲ್ಲೆಡೆ ಯುವ ಜನತೆಯು ಬದಲಾವಣೆ ಬಯಸುತ್ತಿರುವುದನ್ನು ಗಮನಿಸುತ್ತಿದ್ದೇನೆ. ಬದಲಾವಣೆ ಸಾಧ್ಯವಾಗಬೇಕಾದರೆ ಶಾಲೆಗಳಲ್ಲಿ ಎಲ್ಲ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗುವಂತಾಗಬೇಕು. ದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿಯು ಸರ್ಕಾರಿ ಶಾಲೆಗಳಲ್ಲಿ ಅದ್ಭುತ ಬದಲಾವಣೆ ತಂದಿದೆ. ಸ್ವಚ್ಛ ಹಾಗೂ ಗುಣಮಟ್ಟದ ಆಡಳಿತದಿಂದ ಮಾತ್ರ ಇದು ಸಾಧ್ಯ. ಕರ್ನಾಟಕದಲ್ಲೂ ಅಂತಹ ಆಡಳಿತ ಬರಬೇಕು ಎಂಬ ಉದ್ದೇಶದಿಂದ ಎಎಪಿ ಸೇರಿದ್ದೇನೆ ಎಂದರು.










