ನನ್ನನ್ನು ಸಿದ್ರಾಮುಲ್ಲಾ ಖಾನ್ ಎಂದು ಕರೆದರೆ ಖುಷಿಪಡುವೆ : ಸಿದ್ದರಾಮಯ್ಯ.

70
firstsuddi

ಬೆಂಗಳೂರು : ಮಾಜಿ ಸಿಎಂ ಸಿದ್ದರಾಮಯ್ಯ ಸರಣಿ ಟ್ವೀಟ್ ಮೂಲಕ ಶಾಸಕ ಸಿ.ಟಿ ರವಿ ಮತ್ತು ಬಿಜೆಪಿಗೆ ತಿರುಗೇಟು ನೀಡಿದ್ದಾರೆ. ಸುಳ್ಳು, ಅಪಪ್ರಚಾರ ಮತ್ತು ಚಾರಿತ್ರ್ಯಹನನವನ್ನೇ ರಾಜಕೀಯ ಪ್ರಚಾರದ ಸರಕನ್ನಾಗಿ ಮಾಡಿಕೊಂಡ ಬಿಜೆಪಿ ನನ್ನ ಹೆಸರಿಗೆ ಮುಸ್ಲಿಂ ಹೆಸರು ಸೇರಿಸಿ ನಡೆಸುತ್ತಿರುವ ಅಪಪ್ರಚಾರದಲ್ಲಿ ಅಚ್ಚರಿಪಡುವಂತಹದ್ದೇನಿಲ್ಲ. ಶೂನ್ಯ ಸಾಧನೆ, ಭ್ರಷ್ಟಾಚಾರ, ಅನಾಚಾರಗಳ ಮಸಿ ಬಳಿದುಕೊಂಡ ಮುಖ ತೋರಿಸಿ ಮತಯಾಚನೆ ಮಾಡಲಿಕ್ಕಾಗುತ್ತದೆಯೇ?

ಮೈತುಂಬ ಕಪ್ಪು ಬಳಿದುಕೊಂಡ ದುಷ್ಟರಿಗೆ ಬಿಳಿಬಟ್ಟೆ ನೋಡಿದಾಕ್ಷಣ ಕಪ್ಪು ಬಳಿಯೋಣ ಎಂದು ಮನಸ್ಸಾಗುವುದು ಸಹಜ ಗುಣ. ಇದು ಅವರ ಸೋಲು, ಹತಾಶೆ ಮತ್ತು ಅಸಹಾಯಕತೆಯನ್ನು ಸೂಚಿಸುತ್ತದೆ. ಒಂದು ಕಾಲದಲ್ಲಿ ಒಂದಷ್ಟು ಸಭ್ಯಸ್ಥರು ಇದ್ದ ಬಿಜೆಪಿಯಲ್ಲಿ ಇಂತಹ ನೈತಿಕ ಅಧ:ಪತನಕ್ಕೆ ಬಿದ್ದಿರುವುದರ ಬಗ್ಗೆ ಎಲ್ಲರೂ ಸಂತಾಪ ಸೂಚಿಸೋಣ.

ಸಿದ್ರಮುಲ್ಲಾಖಾನ್ ಎಂದು ನನ್ನ ಹೆಸರಿಗೆ ಮುಸ್ಲಿಂ ಹೆಸರು ಸೇರಿಸಿರುವ ಬಗ್ಗೆ ನನಗೇನು ಬೇಸರವಿಲ್ಲ. ಗೋವಿಂದ ಭಟ್ಟರ ಶಿಷ್ಯರಾದ ಶಿಶುನಾಳ ಷರೀಪ್, ಸಂತ ರಮಾನಂದರ ಶಿಷ್ಯರಾದ ಕವಿ ಕಬೀರರ ಪರಂಪರೆ ನಮ್ಮದು. ಆದ್ದರಿಂದ ಮುಸ್ಲಿಂ ಹೆಸರನ್ನು ನನ್ನ ಹೆಸರಿಗೆ ಜೋಡಿಸಿ ಜಾತ್ಯತೀತತೆಯ ನನ್ನ ನಂಬಿಕೆಯನ್ನು ಪುರಸ್ಕರಿಸಿದ್ದಾರೆ.

ಮುಖ್ಯಮಂತ್ರಿಯಾಗಿ ಜನರಿಗಾಗಿ ಮಾಡಿರುವ ಸೇವೆಯನ್ನು ಗುರುತಿಸಿ ಬಹಳಷ್ಟು ಜನ ನನ್ನನ್ನು ‘ಅನ್ನರಾಮಯ್ಯ’, ‘ರೈತರಾಮಯ್ಯ’, ‘ಕನ್ನಡ ರಾಮಯ್ಯ’, ‘ದಲಿತರಾಮಯ್ಯ ಎಂದೆಲ್ಲಾ ಕರೆಯುತ್ತಾರೆ. ಅದೇ ರೀತಿ ಮುಸ್ಲಿಂ ಸಮುದಾಯಕ್ಕೆ ಮಾಡಿರುವ ಕೆಲಸವನ್ನು ಗುರುತಿಸಿ ನನ್ನನ್ನು ‘ಸಿದ್ರಮುಲ್ಲಾ ಖಾನ್’ ಎಂದು ಕರೆದರೆ ಅದಕ್ಕೂ ಖುಷಿಪಡುವೆ.

ಟಿಪ್ಪು ಸುಲ್ತಾನ ಜಯಂತಿಯನ್ನು ವಿವಾದವನ್ನಾಗಿ ಮಾಡಿ ಬಿಜೆಪಿ ಹುಟ್ಟುಹಾಕಿದ ವಿವಾದ ಮತ್ತು ಗಲಭೆಗಳು ರಾಜಕೀಯ ಪ್ರೇರಿತವಾದುದು ಎಂದು ರಾಜ್ಯದ ಜನರಿಗೆ ಮನದಟ್ಟಾಗಿದೆ. ಬಿಜೆಪಿಯ ಮುಖ್ಯಮಂತ್ರಿಗಳಿಂದ ಹಿಡಿದು ಸಚಿವ-ಶಾಸಕರ ವರೆಗೆ ಎಲ್ಲರೂ ಬಗೆಬಗೆಯ ವೇಷಧರಿಸಿ ಟಿಪ್ಪು ಜಯಂತಿ ಆಚರಿಸಿರುವುದನ್ನು ಜನ ನೋಡಿದ್ದಾರೆ.

ಜಗದೀಶ್ ಶೆಟ್ಟರ್ ಮುಖ್ಯಮಂತ್ರಿ ಆಗಿದ್ದಾಗ ಟಿಪ್ಪುವಿನ ಬಗ್ಗೆ 400 ಪುಟಗಳ ಪುಸ್ತಕ ಬರೆಸುವ ಜೊತೆಗೆ ಟಿಪ್ಪುವನ್ನು ಕೊಂಡಾಡಿ ಮುನ್ನುಡಿಯನ್ನೂ ಬರೆದಿದ್ದರು. ವಿಧಾನಮಂಡಲದ ವಜ್ರಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ತಮ್ಮ ಭಾಷಣದಲ್ಲಿ ಟಿಪ್ಪು ಸುಲ್ತಾನನ ಸಾಧನೆಗಳನ್ನು ಉಲ್ಲೇಖಿಸಿ ಶ್ಲಾಘಿಸಿದ್ದರು. ನಾನು ಮುಖ್ಯಮಂತ್ರಿಯಾಗಿದ್ದಾಗ ಹಿಂದೂ ಯುವಕರ ಕೊಲೆ ನಡೆದಿತ್ತು ಎಂಬ ಸುಳ್ಳು ಪ್ರಚಾರವನ್ನೂ ಬಿಜೆಪಿ ನಡೆಸುತ್ತಿದೆ.

ನನ್ನ ವಿರುದ್ಧದ ಅಪಪ್ರಚಾರವನ್ನು ನಿಲ್ಲಿಸಬೇಕೆಂದು ನಾನೇನು ಮನವಿ ಮಾಡುವುದಿಲ್ಲ. ಆದರೆ ಇಂತಹ ಅಪಪ್ರಚಾರಗಳಿಗೆ ಹೆದರಿ ಬಿಜೆಪಿ ಸರ್ಕಾರದ ದುರಾಡಳಿತ, ಭ್ರಷ್ಟಾಚಾರ ಮತ್ತು ಕೋಮುವಾದದ ರಾಜಕಾರಣದ ವಿರುದ್ಧದ ನನ್ನ ಹೋರಾಟವನ್ನು ನಾನು ನಿಲ್ಲಿಸುತ್ತೇನೆ ಎಂದು ತಿಳಿದುಕೊಂಡರೆ ಅದು ಮೂರ್ಖತನ ಅಷ್ಟೇ ಎಂದರು.