ನನ್ನ ಪ್ರಾಣ ಹೋದರೂ ಪರವಾಗಿಲ್ಲ, ಫಯಾಜ್ ಪ್ರಾಣ ತಗೊಳ್ಳುವೆ: ಶಪಥ ಮಾಡಿದ್ದೇನೆಂದ ನೇಹಾ ತಂದೆ ನಿರಂಜನ ಹಿರೇಮಠ.

61
firstsuddi

ಹುಬ್ಬಳ್ಳಿ: ರಾಜ್ಯದಾದ್ಯಂತ ಸಂಚಲನ ಮೂಡಿಸಿದ್ದ ಹುಬ್ಬಳ್ಳಿ ವಿದ್ಯಾರ್ಥಿನಿ ನೇಹಾ ಕೊಲೆ ಪ್ರಕರಣ ದಿಢೀರಾಗಿ ಸಂಭವಿಸಿದ್ದಲ್ಲ. ಆರೋಪಿ ಫಯಾಜ್ ವಾರದ ಮೊದಲೇ ಸಿದ್ಧತೆ ಮಾಡಿಕೊಂಡಿದ್ದ ಎಂಬ ವಿಚಾರ ಬೆಳಕಿಗೆ ಬಂದ ಬೆನ್ನಲ್ಲೇ, ನೇಹಾಳನ್ನು ಅಪಹರಿಸಲು ಆತ ಯತ್ನಿಸಿದ್ದ ಎಂದು ಆಕೆಯ ತಂದೆ ನಿರಂಜನ ಹಿರೇಮಠ ಆರೋಪಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಸಿಐಡಿ ತಂಡದಿಂದ ನೇಹಾ ತಂದೆ ನಿರಂಜನ, ತಾಯಿ ಗೀತಾ ವಿಚಾರಣೆ ನಡೆಯಿತು. ಬಳಿಕ ನಿರಂಜನ ಹಿರೇಮಠ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ನನ್ನ ಪ್ರಾಣ ಹೋದರೂ ಪರವಾಗಿಲ್ಲ, ಫಯಾಜ್ ಪ್ರಾಣ ತಗೊಳ್ಳುತ್ತೇನೆ. ನನ್ನ ಮಗಳ ಶವದ ಮೇಲೆ ನಾನು ಶಪಥ ಮಾಡಿದ್ದೇನೆ. ಆರೋಪಿ ಫಯಾಜ್​ಗೆ ಸಹಾಯ ಮಾಡಿದವರನ್ನೂ ಬಂಧಿಸಬೇಕು ಎಂದು ನಿರಂಜನ ಹಿರೇಮಠ ಆಗ್ರಹಿಸಿದ್ದಾರೆ.

ಎಲ್ಲ ವಿಷಯಗಳನ್ನು ಸಿಐಡಿ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ನಿನ್ನೆ ಫಯಾಜ್​ನನ್ನು ಮಹಜರು ಮಾಡಿರುವ ಬಗ್ಗೆಯೂ ಅವರು ತಿಳಿಸಿದರು. ಹಂತಕ ಫಯಾಜ್ ನನ್ನ ಮಗಳನ್ನು ಕಿಡ್ನ್ಯಾಪ್ ಮಾಡಲು ಯತ್ನಿಸಿದ್ದ. ಕೆಲ ದಿನಗಳಿಂದ ನಮಗೆ ಬೆದರಿಕೆ ಇದೆ. ಯಾರೋ ಮನೆಗೆ ಬಂದು ವಿಡಿಯೋ ಮಾಡುತ್ತಿದ್ದಾರೆ. ಕೆಲ ದಿನಗಳಿಂದ ಅನಾಮಿಕರು ಮನೆ ಸುತ್ತಮುತ್ತ ಒಡಾಡುತ್ತಿದ್ದಾರೆ. ಇದನ್ನು ಸಿಐಡಿ ಅಧಿಕಾರಿಗಳ ಗಮನಕ್ಕೂ ತಂದಿದ್ದೇನೆ ಎಂದು ನಿರಂಜನ ಹಿರೇಮಠ ಹೇಳಿದ್ದಾರೆ.

ಸದ್ಯ ಕೊಲೆ ಪ್ರಕರಣದ ತನಿಖೆಯನ್ನು ಸಿಐಡಿ ನಡೆಸುತ್ತಿದ್ದು, ಆರೋಪಿ ಫಯಾಜ್​ನನ್ನು 6 ದಿನಗಳ ಕಾಲ ವಶಕ್ಕೆ ಪಡೆದಿದೆ. ಕೊಲೆ ಮಾಡುವ ಕೆಲವು ದಿನಗಳ ಮುನ್ನ ಆರೋಪಿ ಫಯಾಜ್ ನೇಹಾ ಹಿರೇಮಠ ಮನೆ ಬಳಿಯೇ ಓಡಾಡಿದ್ದ. ಆ ಮೂಲಕ ನೇಹಾ ಚಲನವಲನವನ್ನು ಗಮನಿಸಿದ್ದ. ಆಕೆಯ ಪ್ರತಿಯೊಂದು ವಿಚಾರಗಳನ್ನು ಗಮನಿಸುತ್ತಿದ್ದ. ಇನ್ನು ಕೊಲೆ ಮಾಡುವ ಐದು ದಿನಗಳ ಮೊದಲೇ ಚಾಕುವೊಂದನ್ನು ಖರೀದಿ ಮಾಡಿದ್ದ ಎಂಬ ವಿಚಾರ ಆರಂಭಿಕ ಹಂತದ ತನಿಖೆ ವೇಳೆ ಬೆಳಕಿಗೆ ಬಂದಿತ್ತು.