ನವೀನ್ ಮೃತದೇಹ ತರುವ ಪ್ರಯತ್ನ ನಡೆಯುತ್ತಿದೆ : ಸಿಎಂ ಬೊಮ್ಮಾಯಿ.

69
firstsuddi

ಬೆಂಗಳೂರು : ಉಕ್ರೇನ್–ರಷ್ಯಾ ಯುದ್ಧದಲ್ಲಿ ಮೃತಪಟ್ಟಿರುವ ಹಾವೇರಿ ಮೂಲದ ವೈದ್ಯಕೀಯ ವಿದ್ಯಾರ್ಥಿ ನವೀನ್ ಮೃತದೇಹದ ಫೋಟೋಗಳು ಬಂದಿವೆ. ಅವರ ಸ್ನೇಹಿತರು ಕಳುಹಿಸಿಕೊಟ್ಟಿದ್ದಾರೆ. ಈ ಬಗ್ಗೆ ಉಕ್ರೇನ್ ಭಾರತೀಯ ರಾಯಭಾರಿ ಕಚೇರಿಗೆ ಮಾತನಾಡುತ್ತೇನೆ. ಮೃತದೇಹವನ್ನು ತರುವ ಪ್ರಯತ್ನವನ್ನು ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನವೀನ್ ಕುಟುಂಬಕ್ಕೆ ಪರಿಹಾರ ನೀಡುತ್ತೇವೆ. ಆದರೆ ನಮ್ಮ ಮೊದಲ ಆದ್ಯತೆ ಅವರ ಮೃತದೇಹವನ್ನು ತರಿಸುವುದಾಗಿದೆ. ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದ ಅವರು, ಕುಟುಂಬ ಕೂಡಾ ದುಃಖದಲ್ಲಿ ಇದೆ. ಶವ ತರಿಸಿಕೊಡುವಂತೆ ಅವರು ಮನವಿ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.

2-3 ದಿನಗಳಲ್ಲಿ 26 ವಿಮಾನಗಳು ಬರಲಿವೆ. ಇದರಲ್ಲಿ ಕನ್ನಡಿಗರನ್ನು ಶೀಘ್ರವಾಗಿ ಕರೆಸಲು ಕ್ರಮ ತೆಗೆದುಕೊಳ್ಳುತ್ತೇವೆ. ಯುದ್ಧ ನಡೆಯುತ್ತಿರುವುದರಿಂದ ಈ ಸಮಸ್ಯೆ ಆಗುತ್ತಿದೆ. ಭಾರತ ಸರ್ಕಾರ ಪ್ಲ್ಯಾನ್ ಮಾಡಿ ವಾರ್ ಝೋನ್ ನಿಂದ ಬೇರೆ ಬೇರೆ ಕಡೆ ಕರೆಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.