ನಾರಾಯಣ ಗುರುಗಳ ಹೋರಾಟದಿಂದಾಗಿ ಕೆಳವರ್ಗದ ಜನ ನೆಮ್ಮದಿಯಿಂದ ಬದುಕಲು ಸಾಧ್ಯವಾಯಿತು : ಕೆ.ಬಿ.ಸುಧಾ.

99
firstsuddi

ಚಿಕ್ಕಮಗಳೂರು : ಬ್ರಹ್ಮಶ್ರೀ ನಾರಾಯಣ ಗುರುಗಳ ಸಾಮಾಜಿಕ ಪರಿವರ್ತನೆ ಹೋರಾಟದಿಂದಾಗಿ ಕೇರಳದಲ್ಲಿ ಕೆಳವರ್ಗದ ಜನ ನೆಮ್ಮದಿಯಿಂದ ಬದುಕಲು ಸಾಧ್ಯವಾಯಿತು ಎಂದು ಜಿಲ್ಲಾ ಸಹೋದರತ್ವ ಸಮಿತಿಯ ಅಧ್ಯಕ್ಷೆ ಕೆ.ಬಿ.ಸುಧಾ ಹೇಳಿದರು.

ನಗರದ ಬಿಎಸ್‍ಪಿ ಕಚೇರಿಯಲ್ಲಿ ಇಂದು ಏರ್ಪಡಿಸಿದ್ದ ಸಮಾಜ ಸುಧಾರಣೆಯ ಹರಿಕಾರ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೇರಳದ ಅತ್ಯಂತ ಕೆಳವರ್ಗದ ಈಳವ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ನಾರಾಯಣ ಗುರುಗಳು ಪರಿವರ್ತನಾ ಚಳುವಳಿಯನ್ನು ನಡೆಸಿದರು, ಆ ಮೂಲಕ ಕೆಳವರ್ಗದದವರಿಗಾಗಿ ಪ್ರತ್ಯೇಕ ದೇವಸ್ಥಾನವನ್ನು ನಿರ್ಮಿಸಿದರು, ನಾರಾಯಣ ಗುರುಗಳ ಹೋರಾಟದಿಂದಾಗಿ ಅಲ್ಲಿನ ಕೆಳವರ್ಗದ ಮಹಿಳೆಯರು ತುಂಡು ವಸ್ತ್ರವನ್ನು ಬಿಟ್ಟು ಪೂರ್ಣಪ್ರಮಾಣದಲ್ಲಿ ಬಟ್ಟೆ ಧರಿಸಲು ಸಾಧ್ಯವಾಯಿತು ಎಂದರು.

ಬಿಎಸ್‍ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಮಾತನಾಡಿ ಸರ್ಕಾರ ನಾರಾಯಣ ಗುರುಗಳ ಜಯಂತಿಯನ್ನು ತೋರಿಕೆಗೆ ಆಚರಣೆ ಮಾಡದೇ, ಅವರ ಸಂದೇಶಗಳನ್ನು ಜನತೆಗೆ ತಿಳಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ನಾರಾಯಣ ಗುರುಗಳ ಸಂದೇಶ ಮತ್ತು ಆದರ್ಶಗಳನ್ನು ಮೈಗೂಡಿಸಿ ಕೊಂಡರೆ ಮಾತ್ರ ಅವರ ಜಯಂತಿಗೆ ಅರ್ಥ ಬರುತ್ತದೆ, ಅವರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ ಎಂದು ತಿಳಿಸಿದರು.

ನಾರಾಯಣ ಗುರುಗಳ ಭಾವಚಿತ್ರಕ್ಕೆ ಸಾಮೂಹಿಕ ಪುಷ್ಪ ನಮನ ಸಲ್ಲಿಸಲಾಯಿತು, ಬಿಎಸ್‍ಪಿ ತಾಲ್ಲೂಕು ಅಧ್ಯಕ್ಷ ಹರೀಶ್ ಮಿತ್ರ ಅಧ್ಯಕ್ಷತೆ ವಹಿಸಿದ್ದರು, ಕಛೇರಿ ಕಾರ್ಯದರ್ಶಿ ಕೆ.ಆರ್.ಗಂಗಾಧರ್, ಕೆ.ಎಸ್.ಮಂಜುಳ, ವಿನೀತ್, ಸಿದ್ದಯ್ಯ, ಓಬಯ್ಯ, ಎನ್.ಎಸ್.ಮಂಜುನಾಥ್, ವಿಜಯಕುಮಾರ್, ಶಾರದಮ್ಮ ಉಪಸ್ಥಿತರಿದ್ದರು.