ನವದೆಹಲಿ : ಬೀದಿ ನಾಯಿಗಳು ಜನರ ಮೇಲೆ ದಾಳಿ ಮಾಡಿದ್ರೆ ಅದಕ್ಕೆ ತಗಲುವ ಚಿಕಿತ್ಸೆ ವೆಚ್ಚ ಬೀದಿ ನಾಯಿಗಳಿಗೆ ನಿತ್ಯ ಆಹಾರ ನೀಡುವವರೇ ಭರಿಸಬೇಕಾಗುತ್ತದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.
ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಜೆಕೆ ಮಹೇಶ್ವರಿ ಅವರ ಪೀಠವು ಕೇರಳದಲ್ಲಿ ಬೀದಿ ನಾಯಿಗಳ ಹಾವಳಿಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ವೇಳೆ ಈ ನಿರ್ಣಯಕ್ಕೆ ಬಂದಿತು. ನಮ್ಮ ದೇಶದಲ್ಲಿ ಹೆಚ್ಚಿನವರು ನಾಯಿ ಪ್ರಿಯರು. ನಾನು ಕೂಡ ನಾಯಿಗಳಿಗೆ ಆಹಾರ ನೀಡುತ್ತೇನೆ. ಆದರೆ, ಜನರು ನಾಯಿಗಳಿಗೆ ಆಹಾರ ಹಾಕುವುದರ ಜೊತೆಗೆ ಅವುಗಳ ಕಾಳಜಿ, ಜವಾಬ್ದಾರಿಯನ್ನೂ ತೆಗೆದುಕೊಳ್ಳಬೇಕು ಎಂದು ನ್ಯಾಯಮೂರ್ತಿ ಸಂಜೀವ್ ಖನ್ನಾ ಹೇಳಿದ್ದಾರೆ.
ವಕೀಲ ವಿ.ಕೆ. ಬಿಜು ಸುಪ್ರೀಂ ಕೋರ್ಟ್ನಲ್ಲಿ ಬೀದಿ ನಾಯಿಗಳ ದಾಳಿಯ ವಿಷಯವನ್ನು ಪ್ರಸ್ತಾಪಿಸಿದ್ದರು. ಸಾರ್ವಜನಿಕ ಸ್ಥಳಗಳಲ್ಲಿ ಶಾಲಾ ಮಕ್ಕಳು ಮತ್ತು ಮಹಿಳೆಯರ ಮೇಲೆ ನಾಯಿಗಳ ದಾಳಿ ನಡೆಯುತ್ತಿದೆ ಎಂದು ಆಗಸ್ಟ್ 8ರವರೆಗಿನ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಇತ್ತೀಚೆಗೆ ಕೇರಳದಲ್ಲಿ 12 ವರ್ಷದ ಬಾಲಕಿಯ ಸಾವನ್ನು ಸುಪ್ರೀಂನಲ್ಲಿ ವಿವರಿಸಿದರು. ವಾದಗಳನ್ನು ಆಲಿಸಿದ ನಂತರ, ಸುಪ್ರೀಂ ಕೋರ್ಟ್ ಈ ವಿಷಯವನ್ನು ಸೆಪ್ಟೆಂಬರ್ 28ಕ್ಕೆ ವಿಚಾರಣೆ ಮುಂದೂಡಿ ಪ್ರಾಣಿ ದಯಾ ಸಂಘಗಳಿಗೆ ಆಕ್ಷೇಪಣೆ ಸಲ್ಲಿಸಲು ತಿಳಿಸಿದೆ.










