ನಾವು ವಂಶ ರಾಜಕಾರಣದ ಕುಡಿಯಾಗಿ ಬೆಳೆದು ಬಂದವರಲ್ಲ : ಸಚಿವ ಆರ್. ಅಶೋಕ್ ಟಾಂಗ್…

217
firstsuddi

ಬೆಂಗಳೂರು : ನಾವ್ಯಾರೂ ಅಣಬೆಗಳ ರೀತಿ ಬೆಳೆದು ಬಂದಿಲ್ಲ. ವಂಶ ರಾಜಕಾರಣದ ಕುಡಿಯಾಗಿ ಬೆಳೆದು ಬಂದವರಲ್ಲ. ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ಮಾಡಿ ಜೈಲು ಸೇರಿ ಪಕ್ಷ ಕಟ್ಟಿ ನೆಲಮಟ್ಟದಿಂದ ಬೆಳೆದು ಬಂದವರು ಎಂದು ಕಂದಾಯ ಸಚಿವ ಆರ್. ಅಶೋಕ್ ಅವರು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಟಾಂಗ್ ನೀಡಿದರು. ನಗರದ ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ರಾಷ್ಟ್ರೀಯ ನಾಯಕ. ಅವರ ಹೆಸರನ್ನು ಹೇಳಿರುವುದು ನಿಜ. ಈ ಹಿಂದೆ ವಾಜಪೇಯಿ, ಅಡ್ವಾಣಿ ಹಾಗೂ ದೀನದಯಾಳ್ ಅವರ ಹೆಸರನ್ನು ಹೇಳಿದ್ದೇವೆ. ನಮಗೆ ಸಾರ್ವಜನಿಕ ನಾಯಕರು ಹಾಗೂ ಪಕ್ಷದ ನಾಯಕರು ಇದ್ದಾರೆ. ಆದರೆ ಕುಟುಂಬದ ನಾಯಕರಿಲ್ಲ. ಪಕ್ಷದಲ್ಲಿ ಯಾರೇ ನಾಯಕರಾದರೂ ಅವರ ಹೆಸರನ್ನು ಹೇಳುತ್ತೇವೆ. ನಾವು ಕಷ್ಟಪಟ್ಟು ಬೆಳೆದು ಬಂದಿದ್ದೇವೆ. ನಾವು ಅಣಬೆಗಳ ರೀತಿ ಬೆಳೆದು ಬಂದಿಲ್ಲ. ತುರ್ತು ಪರಿಸ್ಥಿತಿಯಲ್ಲಿ ಹೋರಾಟ ಮಾಡಿ ಜೈಲು ಸೇರಿ ಪಕ್ಷ ಕಟ್ಟಿ ತಳಮಟ್ಟದಿಂದ ಬೆಳೆದು ಬಂದಿದ್ದೇವೆ. ಆದರೆ ಜೆಡಿಎಸ್ ಪಕ್ಷದಿಂದ ಕುಟುಂಬ ರಾಜಕಾರಣ ಮಾತ್ರ ಇದೆ ಎಂದು ಹೇಳಿದ್ದು, ಇದೇ ವೇಳೆ ಕ್ರಿಕೆಟ್ ಬೆಟ್ಟಿಂಗ್ ದಂಧೆಯ ಹಣದಿಂದ ಅನರ್ಹ ಶಾಸಕರನ್ನು ಖರೀದಿ ಮಾಡಿದ್ದಾರೆ ಎಂಬ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಯಿಸಿದ ಅವರು, ನಮ್ಮ ಸರ್ಕಾರ ಯಾವುದೇ ಕ್ರಿಕೆಟ್ ಬೆಟ್ಟಿಂಗ್, ನೈಟ್ ಕ್ಲಬ್‍ಗೆ ಅವಕಾಶ ಕೊಟ್ಟಿಲ್ಲ. ಬೆಟ್ಟಿಂಗ್‍ನಿಂದ ಹಣ ಪಡೆದವರು ಯಾರು ಎಂದು ಮೊದಲು ಹೇಳಲಿ. ಸುಮ್ಮನೆ ಹಿಟ್ ಅಂಡ್ ರನ್ ಹೇಳಿಕೆ ನೀಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.