ತಿರುವನಂತಪುರಂ : ನಿಷೇಧಿಸಿದ್ದರೂ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ(ಪಿಎಫ್ಐ) ಚಟುವಟಿಕೆಗಳು ಕಂಡುಬಂದ ಹಿನ್ನೆಲೆ ಕೇರಳದ 56 ಕಡೆಗಳಲ್ಲಿ ಇಂದು ಬೆಳ್ಳಂಬೆಳಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ ದಾಳಿ ನಡೆಸಿದೆ.
ತಿರುವನಂತಪುರಂ, ಕೊಲ್ಲಂ, ಪತ್ತನಂತಿಟ್ಟ, ಎರ್ನಾಕುಲಂ, ಆಲಪ್ಪುಳ ಹಾಗೂ ಮಲಪ್ಪುರಂನಲ್ಲಿ ಎನ್ಐಎ ರೇಡ್ ನಡೆಸಿದೆ. ಎರ್ನಾಕುಲಂನಲ್ಲಿ 8 ಕಡೆ, ಅಲಪ್ಪುಳ ಹಾಗೂ ಮಲಪ್ಪುರಂನಲ್ಲಿ 4 ಕಡೆ ಹಾಗೂ ತಿರುವನಂತಪುರಂನಲ್ಲಿ 3 ಕಡೆ ಏಜೆನ್ಸಿ ದಾಳಿ ನಡೆಸಿರುವುದಾಗಿ ವರದಿಯಾಗಿದೆ.
ಕೇಂದ್ರ ಗೃಹ ಸಚಿವಾಲಯದ ಪ್ರಕಾರ, ನಿಷೇಧಿತ ಸಂಘಟನೆಯು ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕದಲ್ಲಿದೆ. ಅದರ ಮೂಲಕ ಹಣವನ್ನು ಸಂಗ್ರಹಿಸಲು ಪ್ರಯತ್ನಿಸುತ್ತಿದೆ. ಬೇರೆ ಹೆಸರಿನಲ್ಲಿ ಪಿಎಫ್‍ಐ ಅನ್ನು ಮರುಸ್ಥಾಪಿಸಲು ಪ್ರಯತ್ನಿಸಲಾಗುತ್ತಿದೆ ಎಂಬುದು ತಿಳಿದುಬಂದಿದೆ.
ಕೆಲ ತಿಂಗಳ ಹಿಂದೆ ಐದು ವರ್ಷಗಳ ಕಾಲ ಪಿಎಫ್‍ಐ ಬ್ಯಾನ್ ಮಾಡಿ ಕೇಂದ್ರ ಗೃಹ ಇಲಾಖೆ ಆದೇಶ ಹೊರಡಿಸಿದೆ. ಕೇಂದ್ರ ಸರ್ಕಾರವು ಪಿಎಫ್‍ಐ ಮತ್ತು ಅದರ ಅಂಗಸಂಸ್ಥೆಗಳನ್ನು ಕಾನೂನುಬಾಹಿರ ಸಂಘಟನೆ ಎಂದು ಮುಂದಿನ ಐದು ವರ್ಷಗಳವರೆಗೆ ನಿಷೇಧ ಹೇರಿದೆ.










