ನವದೆಹಲಿ: ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು 8 ತಿಂಗಳಲ್ಲಿ ಬರೋಬ್ಬರಿ 46 ಕೆಜಿ ತೂಕ ಇಳಿಸಿಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
130 ಕೆ.ಜಿ ತೂಕವಿದ್ದ ಮೆಟ್ರೋ ಉಪ ಪೊಲೀಸ್ ಆಯುಕ್ತ ಜಿತೇಂದ್ರ ಮಣಿ ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಆದರೆ ಬದುಕನ್ನು ಸವಾಲಾಗಿ ಸ್ವೀಕರಿಸಿದ ಜೀತೆಂದ್ರ ಮಣಿ ಸಂಪೂರ್ಣ ಬದಲಾವಣೆ ಮಾಡಿಕೊಂಡಿದ್ದಾರೆ. ಪ್ರತಿದಿನ 15 ಸಾವಿರ ಹೆಜ್ಜೆ ನಡೆಯುವ ಜೊತೆಗೆ, ಪೌಷ್ಠಿಕ ಆಹಾರ ಸೇವನೆ ಮಾಡುವ ಕ್ರಮವನ್ನ ರೂಢಿಸಿಕೊಂಡಿದ್ದಾರೆ.
ಜಂಕ್ ಫುಡ್ ಗಳನ್ನ ಬದಿಗಿಟ್ಟು ರೊಟ್ಟಿ, ಸೂಪ್, ಸಲಾಡ್ ಹಾಗೂ ಹಣ್ಣುಗಳಂತಹ ಪೌಷ್ಠಿಕಾಂಶದ ಆಹಾರಗಳನ್ನು ಸೇವಿಸತೊಡಗಿದರು. ಇದರ ಪರಿಣಾಮ ಕೇವಲ 8 ತಿಂಗಳಲ್ಲಿ ಬರೋಬ್ಬರಿ 46 ಕೆಜಿ ತೂಕ ಇಳಿಸಿಕೊಂಡಿದ್ದಾರೆ.
ಈ ಕುರಿತು ಮಾತನಾಡಿರುವ ಜೀತೇಂದ್ರ ಮಣಿ, 8 ತಿಂಗಳಲ್ಲಿ 32 ಲಕ್ಷಕ್ಕೂ ಹೆಚ್ಚು ಮೆಟ್ಟಿಲುಗಳನ್ನು ಏರಿದ್ದೇನೆ. ಪ್ರತಿ ತಿಂಗಳು 4.5 ಲಕ್ಷ ಹೆಜ್ಜೆ ನಡೆಯುವ ಗುರಿ ಹಾಕಿಕೊಂಡಿದ್ದೆ. ಇದರಿಂದ 130 ಕೆ.ಜಿಯಿಂದ 84 ಕೆಜಿಗೆ ದೇಹವನ್ನು ಇಳಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ.
ಪೊಲೀಸ್ ಅಧಿಕಾರಿ ಪ್ರಯತ್ನವನ್ನು ಶ್ಲಾಂಘಿಸಿದ ದೆಹಲಿ ಪೊಲೀಸ್ ಆಯುಕ್ತರು ಇಲಾಖೆಯಿಂದ ಪ್ರಶಂಸನಾ ಪತ್ರ ನೀಡಿ ಗೌರವಿಸಿದ್ದಾರೆ.










