ನವದೆಹಲಿ : ದೆಹಲಿಯಲ್ಲಿ ದೀಪಾವಳಿಯಂದು ಪಟಾಕಿಯ ನಿಷೇಧವಿದ್ದರೂ ಜನರು ಪಟಾಕಿ ಹಚ್ಚಿ ಸಂಭ್ರಮಿಸುತ್ತಿದ್ದಾರೆ ಇದರ ಪರಿಣಾಮ ವಾಯು ಗುಣಮಟ್ಟ ತೀವ್ರ ಕುಸಿತವಾಗಿದೆ.
ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕವು ಇಂದು ಬೆಳಗ್ಗೆ 6 ಗಂಟೆಗೆ 323 ರಷ್ಟಿತ್ತು ಎಂದು ಸಿಸ್ಟಮ್ ಆಫ್ ಏರ್ ಕ್ವಾಲಿಟಿ ಮತ್ತು ಹವಾಮಾನ ಮುನ್ಸೂಚನೆ ಮತ್ತು ಸಂಶೋಧನೆ ತೋರಿಸಿದೆ. ನೆರೆಯ ಗುರುಗ್ರಾಮ್, ನೋಯ್ಡಾ ಮತ್ತು ಫರಿದಾಬಾದ್ ನಲ್ಲಿಯೂ ಗಾಳಿಯ ಗುಣಮಟ್ಟವು ಅತ್ಯಂತ ಕಳಪೆ ಮಟ್ಟಕ್ಕೆ ತಲುಪಿದೆ. ದೀಪಾವಳಿಯಿಂದಾಗಿ ಅನುಮತಿಸಿದ್ದ ಡೆಸಿಬಲ್ ಮಿತಿಗಳನ್ನು ಮೀರಿ ಪಟಾಕಿ ಸಿಡಿಸಲಾಗಿದೆ. ಇದರಿಂದಾಗಿ ಸಾರ್ವಜನಿಕರ ಉಸಿರಾಟಕ್ಕೂ ತೊಂದರೆಯಾಗುತ್ತಿದೆ.
0 ರಿಂದ 50 ರ ನಡುವಿನ AQI ಅನ್ನು ಉತ್ತಮ ಎಂದು ಪರಿಗಣಿಸಲಾಗುತ್ತದೆ, 51 ರಿಂದ 100 ತೃಪ್ತಿದಾಯಕ, 101 ರಿಂದ 200 ಮಧ್ಯಮ, 201 ರಿಂದ 300 ಕಳಪೆ, 301 ರಿಂದ 400 ಅತ್ಯಂತ ಕಳಪೆ ಮತ್ತು 401 ರಿಂದ 500 ತೀವ್ರ ಎಂದು ಹೇಳಲಾಗಿದೆ.
ವಾಯು ಮಾಲಿನ್ಯದಿಂದಾಗಿ ದೆಹಲಿ ಸರ್ಕಾರ ಪಟಾಕಿ ನಿಷೇಧಿಸಿದ್ದು, ಆದೇಶ ಉಲ್ಲಂಘಿಸಿದವರಿಗೆ ದಂಡ ಹಾಗೂ 6 ತಿಂಗಳ ಶಿಕ್ಷೆ ವಿಧಿಸಲು ಮುಂದಾಗಿದೆ. ಆದರೆ ಸುಪ್ರೀಂ ಕೋರ್ಟ್ ಪಟಾಕಿ ನಿಷೇಧವನ್ನು ತೆಗೆದುಹಾಕಿತ್ತು.










