ನೇಹಾ ಹತ್ಯೆ ಪ್ರಕರಣ: ನೇಹಾಳನ್ನು 9 ಬಾರಿ ಅಲ್ಲ 14 ಸಲ ಇರಿದು ಕೊಂದ ಫಯಾಜ್.

42
firstsuddi

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯರಾದ ನಿರಂಜನ್ ಹಿರೇಮಠ್ ಅವರ ಪುತ್ರಿ, ಬಿವಿಬಿ ಕಾಲೇಜು ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ ರಾಷ್ಟ್ರದಾದ್ಯಂತ ಭಾರಿ ಸಂಚಲನ ಸೃಷ್ಟಿಸಿದ್ದು, ಪ್ರಕರಣ ಕ್ಷಣಕ್ಕೊಂದು ಬಣ್ಣ ಪಡೆಯುತ್ತಿದೆ. ನಿತ್ಯವೂ ಪ್ರತಿಭಟನೆಗಳು ನಡೆಯುತ್ತಿವೆ. ಇದರ ನಡುವೆ ಕೊಲೆಯಾದ ನೇಹಾಳ ಮರಣೋತ್ತರ ವರದಿ ಬಿಡುಗಡೆಯಾಗಿದ್ದು, ಭಯಾನಕ ಸಂಗತಿ ಬಯಲಾಗಿದೆ.

ಬಂಧಿತ ಆರೋಪಿ ಫಯಾಜ್, ನೇಹಾಳನ್ನು 9 ಅಲ್ಲ ಬದಲಾಗಿ 14 ಬಾರಿ ಚುಚ್ಚಿ ಕೊಂದಿದ್ದಾನೆ. ನೇಹಾ ಹಿರೇಮಠ ದೇಹದ ಮೇಲೆ 14 ಗಾಯಗಳ ಗುರುತು ಪತ್ತೆಯಾಗಿದೆ. ಹೃದಯ ಭಾಗಕ್ಕೆ ಚಾಕುವಿನಿಂದ ಇರಿದಿದ್ದಾನೆ. ಕುತ್ತಿಗೆಗೆ ಹಲವು ಬಾರಿ ಇರಿದಿದ್ದರಿಂದ ರಕ್ತನಾಳ ತುಂಡಾಗಿ ವಿಪರೀತ ರಕ್ತಸ್ರಾವವಾಗಿದೆ, ಹೀಗಾಗಿ ರಕ್ತಸ್ರಾವದಿಂದಲೇ ಆಕೆ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.

ನೇಹಾ ಹಿರೇಮಠ ಎಂಬ ಎಂಸಿಎ ವಿದ್ಯಾರ್ಥಿನಿ ಏ.18 (ಗುರುವಾರ)ರಂದು ಹುಬ್ಬಳ್ಳಿಯ ವಿದ್ಯಾನಗರದಲ್ಲಿರುವ ಬಿವಿಬಿ ಕಾಲೇಜಿಗೆ ಪರೀಕ್ಷೆ ಬರೆಯಲು ಬಂದಿದ್ದರು. ಪರೀಕ್ಷೆ ಬರೆದು ಮನೆಗೆ ಹೋಗುವಾಗ ಫಯಾಜ್ ಎಂಬುವನು ಕಾಲೇಜು ಆವರಣದಲ್ಲಿ ನೇಹಾ ಹಿರೇಮಠ ಅವರನ್ನು 14 ಬಾರಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದನು. ಆರೋಪಿ ಫಯಾಜ್ ನೇಹಾ ಹಿರೇಮಠರನ್ನು ಕೊಲೆ ಮಾಡಿ ಪರಾರಿಯಾಗಿದ್ದನು. ಕೂಡಲೆ ಕಾಲೇಜು ಆವರಣದಲ್ಲಿದ್ದ ವಿದ್ಯಾರ್ಥಿಗಳು ನೇಹಾರನ್ನು ಕೆಎಂಸಿ ಆಸ್ಪತ್ರೆಗೆ ದಾಖಲಿಸಿದರು. ಅಷ್ಟೊತ್ತಿಗಾಗಲೇ ನೇಹಾ ಹಿರೇಮಠ ಅವರು ಕೊನೆಯುಸಿರೆಳೆದಿದ್ದರು.