ಪಂಚರಾಜ್ಯ ಚುನಾವಣಾ ಫಲಿತಾಂಶ – ಯಾವ ರಾಜ್ಯದ ಗದ್ದುಗೆ ಯಾರಿಗೆ..?

67
firstsuddi

ನವದೆಹಲಿ : ಪಂಚರಾಜ್ಯ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಉತ್ತರ ಪ್ರದೇಶ, ಉತ್ತರಾಖಂಡ್, ಗೋವಾ, ಮಣಿಪುರದಲ್ಲಿ ಮತ್ತೆ ಬಿಜೆಪಿ ಅಧಿಕಾರ ಹಿಡಿದಿದ್ದರೆ, ಪಂಜಾಬ್ ನಲ್ಲಿ ಆಮ್ ಆದ್ಮಿ ಪಕ್ಷ ಗೆಲುವು ಸಾಧಿಸಿದೆ.

ಸಿಕ್ಕಿಂ, ಬಿಹಾರ, ಮಿಜೋರಾಂ, ನಾಗಾಲ್ಯಾಂಡ್, ಮೇಘಾಲಯ, ಗೋವಾದಲ್ಲಿ ಬಿಜೆಪಿ ಮೈತ್ರಿ ಮಾಡಿಕೊಳ್ಳುವ ಮೂಲಕ ಅಧಿಕಾರದಲ್ಲಿದೆ. ಒಟ್ಟಾರೆ 17 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿದಿದೆ. ಇನ್ನೂ ಕಾಂಗ್ರೆಸ್ ರಾಜಸ್ಥಾನ, ಛತ್ತೀಸ್ ಗಢದಲ್ಲಿ ಪೂರ್ಣ ಅಧಿಕಾರದಲ್ಲಿದ್ದರೆ ಜಾರ್ಖಂಡ್, ಮಹಾರಾಷ್ಟ್ರ, ತಮಿಳುನಾಡಿನಲ್ಲಿ ಮೈತ್ರಿ ಮಾಡಿಕೊಂಡಿದೆ.

ಉತ್ತರ ಪ್ರದೇಶದ ಒಟ್ಟು 403 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಅದರ ಮೈತ್ರಿಪಕ್ಷಗಳು ಒಟ್ಟು 273 ಕ್ಷೇತ್ರಗಳನ್ನು ಬಾಚಿಕೊಂಡಿದೆ. ಅದರಲ್ಲಿ ಬಿಜೆಪಿ ಒಂದೇ ಪಕ್ಷ 255 ಕ್ಷೇತ್ರಗಳನ್ನು ಗೆದ್ದಿದೆ. ಇನ್ನು ಕಾಂಗ್ರೆಸ್ , ಸಮಾಜವಾದಿ ಪಕ್ಷಗಳು ನೆಲಕಚ್ಚಿವೆ. ಕಾಂಗ್ರೆಸ್ 2 ಕ್ಷೇತ್ರದಲ್ಲಿ, ಬಿಎಸ್ಪಿ 1 ಕ್ಷೇತ್ರದಲ್ಲಿ ಗೆದ್ದಿವೆ.

ಪಂಜಾಬ್ ನಲ್ಲಿ ಆಡಳಿತದಲ್ಲಿದ್ದ ಕಾಂಗ್ರೆಸ್ ನೆಲಕಚ್ಚಿದೆ. ಒಟ್ಟು 117 ವಿಧಾನಸಭಾ ಕ್ಷೇತ್ರಗಳಿರುವ ಪಂಜಾಬ್ನಲ್ಲಿ 92ರಲ್ಲಿ ಆಮ್ ಆದ್ಮಿ ಪಾರ್ಟಿ ಗೆದ್ದುಕೊಂಡಿದ್ದರೆ, 18 ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಗೆದ್ದಿದೆ. ಬಿಜೆಪಿ 2, ಬಿಎಸ್ಪಿ 1, ಶಿರೋಮಣಿ ಅಕಾಲಿ ದಳ -3 ಮತ್ತು ಪಕ್ಷೇತರರು ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ.

ಉತ್ತರಾಖಂಡ್ ನಲ್ಲೂ ಬಿಜೆಪಿಗೆ ಗೆಲುವು. ಇಲ್ಲಿನ ಒಟ್ಟು 70 ಕ್ಷೇತ್ರಗಳ ಪೈಕಿ 47ರಲ್ಲಿ ಬಿಜೆಪಿ ಗೆದ್ದುಕೊಂಡಿದೆ. ಕಾಂಗ್ರೆಸ್ 19, ಬಿಎಸ್ಪಿ 2 ಮತ್ತು ಪಕ್ಷೇತರರು ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ.

ಗೋವಾದಲ್ಲಿ 40 ಕ್ಷೇತ್ರಗಳಿದ್ದು, ಅಲ್ಲೀಗ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಇಲ್ಲಿ ಕಾಂಗ್ರೆಸ್ 11, ಆಮ್ ಆದ್ಮಿ ಪಾರ್ಟಿ 2, ಗೋವಾ ಫಾರ್ವರ್ಡ್ ಪಾರ್ಟಿ 1, ಪಕ್ಷೇತರರು ಮೂರು, ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷ 2, ರೆವಲ್ಯೂಷನರಿ ಗೋವನ್ಸ್ ಪಕ್ಷ 1 ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ.

ಮಣಿಪುರದಲ್ಲೂ ಬಿಜೆಪಿಯೇ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಅಲ್ಲಿನ ಒಟ್ಟು 60 ಕ್ಷೇತ್ರಗಳಲ್ಲಿ ಬಿಜೆಪಿ 31 ಸೀಟ್ ಗೆದ್ದುಕೊಂಡಿದೆ. ಇನ್ನುಳಿದಂತೆ ಕಾಂಗ್ರೆಸ್ 5, ಜನತಾದಳ-6, ನ್ಯಾಷನಲ್ ಪೀಪಲ್ಸ್ ಪಾರ್ಟಿ-7, ನಾಗಾ ಪೀಪಲ್ಸ್ ಫ್ರಂಟ್ 5, ಕುಕಿ ಪೀಪಲ್ಸ್ ಅಲಿಯನ್ಸ್ 2 ಮತ್ತು ಪಕ್ಷೇತರರು 3 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ.