ಪಂಜಾಬ್ ಫ್ಲೈ ಓವರ್‌ನಲ್ಲಿ 15-20 ನಿಮಿಷ ಸಿಲುಕಿಕೊಂಡ ಮೋದಿ – ರ್‍ಯಾಲಿ ದಿಢೀರ್ ರದ್ದು…

68
firstsuddi

ಚಂಡೀಗಢ: ಭದ್ರತಾ ಲೋಪದಿಂದಾಗಿ ಪ್ರಧಾನಿ ನರೇಂದ್ರ ಮೋದಿ ಪಂಜಾಬ್ ನ ಫ್ಲೈ ಓವರ್ ನಲ್ಲಿ ಸುಮಾರು 15 ರಿಂದ 20 ನಿಮಿಷಗಳ ಕಾಲ ಸಿಲುಕಿಕೊಂಡರು. ಹೀಗಾಗಿ ಪಂಜಾಬ್ ನ ಫಿರೋಜ್​​​ಪುರ್​​ನಲ್ಲಿ ಇಂದು ನಡೆಯಬೇಕಾಗಿದ್ದ ಚುನಾವಣಾ ರ್‍ಯಾಲಿ ದಿಢೀರ್ ಆಗಿ ರದ್ದುಗೊಳಿಸಿದ್ದಾರೆ.

ಪಂಜಾಬ್ ನ ಹುಸೇನಿವಾಲಾದಲ್ಲಿರುವ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ಭೇಟಿ ನೀಡಲು ಪ್ರಧಾನಿ ಮೋದಿ ಬಟಿಂಡಾಗೆ ಬಂದಿಳಿದಿದ್ದರು. ಈ ವೇಳೆ ಹೆಲಿಕಾಪ್ಟರ್ ಮೂಲಕ ಅವರು ಸ್ಥಳಕ್ಕೆ ತೆರಳಬೇಕಿತ್ತು. ಆದರೆ ಹವಾಮಾನ ವೈಪರೀತ್ಯದಿಂದಾಗಿ ಅದು ಸಾಧ್ಯವಾಗಿಲ್ಲ. ಹೀಗಾಗಿ ಕಾರಿನಲ್ಲಿ ತೆರಳುತ್ತಿದ್ದರು. ಆದರೆ ಬೃಹತ್ ಪ್ರತಿಭಟನೆ ಕಾರಣದಿಂದಾಗಿ ಫ್ಲೈ ಓವರ್ ನಲ್ಲಿ ರಸ್ತೆ ಬ್ಲಾಕ್ ಆಗಿತ್ತು. ಇದರಿಂದ ಸುಮಾರು 15-20 ನಿಮಿಷಗಳ ಕಾಲ ಪ್ರಧಾನಿ ಮೋದಿ ಅವರು ಫ್ಲೈ ಓವರ್ ನಲ್ಲೇ ಸಿಲುಕುವಂತಾಯಿತು.

ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ಭಾಗಿಯಾಗದೇ ವಾಪಸ್ ಆಗಿದ್ದು, ಕೇಂದ್ರ ಗೃಹ ಸಚಿವಾಲಯ ಪಂಜಾಬ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ. ಭದ್ರತಾ ಸಿಬ್ಬಂದಿ ಲೋಪವೇ ಇದಕ್ಕೆ ಕಾರಣ, ರಾಜ್ಯ ಸರ್ಕಾರದಿಂದ ವಿವರವಾದ ವರದಿ ಕೇಳಲಾಗಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.