ಬಳ್ಳಾರಿ : ಗಂಡ ಹೆಂಡತಿಯ ನಡುವೆ ಆರಂಭವಾದ ಜಗಳ ಹೆಂಡತಿಯ ಸಹೋದರನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಹಂಪ ಸಾಗರ ಗ್ರಾಮದಲ್ಲಿ ನಡೆದಿದೆ. ಆಕಾಶ್ ನಾಯ್ಕ್ (23) ಮೃತ ದುರ್ಧೈವಿ ಎಂದು ಗುರುತಿಸಲಾಗಿದೆ. ಜಿಲ್ಲೆಯ ಹಡಗಲಿ ತಾಲ್ಲೂಕಿನ ಕಾಲ್ವಿ ತಾಂಡಾದ ನಿವಾಸಿಯಾಗಿದ್ದ ರವಿನಾಯ್ಕ್ ಅವರು ಹಂಪ ಸಾಗರದ ಸೀಮಾ ಅವರನ್ನು ಕಳೆದ ಆರು ವರ್ಷಗಳ ಹಿಂದೆ ವಿವಾಹವಾಗಿದ್ದು, ಅವರಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿ ಪತ್ನಿ ತನ್ನ ಮಕ್ಕಳೊಂದಿಗೆ ತವರು ಮನೆ ಸೇರಿದ್ದರು. ಬಳಿಕ ಕುಟುಂಬಸ್ಥರು ರಾಜೀ ಸಂಧಾನ ಮಾಡಿ ಸೀಮಾಳನ್ನು ಗಂಡನ ಮನೆಗೆ ಕಳುಹಿಸಲು ನಿರ್ಧಾರ ಮಾಡಿದರು. ಈ ವೇಳೆ ಪತ್ನಿಯ ಮನೆಗೆ ಆಗಮಿಸಿದ ಪತಿ ಪತ್ನಿಯೊಂದಿಗೆ ಜಗಳವಾಡುತ್ತಿದ್ದ ವೇಳೆ ನಡುವೆ ಬಂದ ಸೀಮಾ ಅವರ ತಾಯಿ ಹಾಗೂ ಪತ್ನಿಯ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿ ಸ್ಥಳದಿಂದ ಓಡಿ ಹೋಗುತ್ತಿದ್ದಾಗ ಗ್ರಾಮದ ಹೊರ ವಲಯದ ಡಾಬಾದ ಬಳಿ ಕುಳಿತಿದ್ದ ಸೀಮಾ ಅವರ ಸಹೋದರ ಆಕಾಶ್ ನಾಯ್ಕ್ ಅವರಿಗೆ ಕೊಡಲಿಯಿಂದ ಕುತ್ತಿಗೆ ಹಾಗೂ ತಲೆಯ ಭಾಗಕ್ಕೆ ಗಂಭೀರವಾಗಿ ಹಲ್ಲೆ ಮಾಡಿದ್ದು, ಪರಿಣಾಮ ಆಕಾಶ್ ನಾಯ್ಕ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಲ್ಲೆಯಿಂದ ಗಂಭೀರ ಗಾಯಗೊಂಡ ಪತ್ನಿ ಹಾಗೂ ತಾಯಿ ಕಮಲಾ ಬಾಯಿ ಅವರನ್ನು ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಹಗರಿಬೊಮ್ಮನಹಳ್ಳಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಟು ಆರೋಪಿ ಪತಿಯನ್ನು ಬಂಧಿಸಿದ್ದಾರೆ.










