ಚಿಕ್ಕಮಗಳೂರು : ಸಂವಿಧಾನದ ಬಗ್ಗೆ ಯಾರಿಗೆ ತಿಳುವಳಿಕೆ ಇರುತ್ತದೋ ಅವರು ಗೋಹತ್ಯೆ ನಿಷೇಧ ಕಾಯ್ದೆಯನ್ನು ವಿರೋಧಿಸುವುದಿಲ್ಲ : ಸಿ.ಟಿ. ರವಿ.

199
firstsuddi

ಚಿಕ್ಕಮಗಳೂರು : ಸಂವಿಧಾನದ ಬಗ್ಗೆ ಯಾರಿಗೆ ಶ್ರದ್ಧೆ ಹಾಗೂ ತಿಳುವಳಿಕೆ ಇರುತ್ತದೋ ಅವರು ಯಾರೂ ಗೋಹತ್ಯೆ ನಿಷೇಧ ಕಾಯ್ದೆಯನ್ನು ವಿರೋಧ ಮಾಡುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಹೇಳಿದರು. ನಗರದಲ್ಲಿ ಗೋಹತ್ಯೆ ನಿಷೇಧ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂವಿಧಾನ ಕರ್ತೃ, ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರು ಗೋಹತ್ಯೆ ನಿಷೇಧವನ್ನು ಪ್ರಸ್ತಾಪ ಮಾಡಿದ್ದಾರೆ. 1964ರಲ್ಲೇ ಗೋಹತ್ಯೆ ನಿಷೇಧ ಕಾಯ್ದೆ ಬಂದಿದೆ. ಆ ಕಾಯ್ದೆಯನ್ನು ಇನ್ನಷ್ಟು ಬಲಗೊಳಿಸುವ ಕೆಲಸವಷ್ಟೇ ಈಗ ಮಾಡಿರುವುದು. 1964ರಲ್ಲಿ ಆಡಳಿತದಲ್ಲಿ ಇದ್ದದ್ದು ಜನ ಸಂಘನೂ ಅಲ್ಲ, ಬಿಜೆಪಿಯೂ ಅಲ್ಲ. 1950-1951ರಲ್ಲಿ ಸಂವಿಧಾನ ತರಬೇಕಾದರೆ ಅಂಬೇಡ್ಕರ್ ಅವರಿಗೆ ಸಲಹೆ ನೀಡಿದ್ದು ಬಿಜೆಪಿ ಅಲ್ಲ, ಮೋದಿಯವರೂ ಅಲ್ಲ. ಈ ದೇಶದ ಸಂಸ್ಕೃತಿ, ಅವರ ಮನಸ್ಸಿಗೆ ಆ ರೀತಿ ಉಲ್ಲೇಖ ಮಾಡುವಂತೆ ಮಾಡಿತು. ಈ ದೇಶದಲ್ಲಿ ಇರುವುದು ಪುರಾತನವಾದ ಸಂಸ್ಕೃತಿ. ಗೋವನ್ನು ಪೂಜ್ಯ ಭಾವನೆಯಿಂದ ಮಾತ್ರವಲ್ಲ ಅದು ಎಲ್ಲಾ ರೀತಿಯಲ್ಲೂ ದೇಶಕ್ಕೆ ಬಲಕೊಟ್ಟಂತಹ ಒಂದು ಸಂಗತಿ. ಗೋವಿನ ಜೊತೆಯಲ್ಲಿಯೇ ಜೀವನ. ಹಾಗಾಗಿಯೇ ಸಂವಿಧಾನದಲ್ಲಿ ಗೋಹತ್ಯೆ ನಿಷೇಧವನ್ನು ಪ್ರಸ್ತಾಪ ಮಾಡಲಾಗಿದೆ.
ಇನ್ನು ಕಾಂಗ್ರೆಸ್ಸಿನವರು ಇತಿಹಾಸವನ್ನು ಮರೆತಿದ್ದಾರೆ. ಈಗಿರುವ ಕಾಂಗ್ರೆಸ್ಸಿಗೂ ಹಿಂದಿನ ಕಾಂಗ್ರೆಸ್ಸಿಗೂ ಯಾವುದೇ ಸಂಬಂಧವಿಲ್ಲ. ಅವರಿಗೆ ತಿಳಿದಿಲ್ಲ. ಜೋಡೆತ್ತು ಅವರ ಪಕ್ಷದ ಗುರುತಾಗಿತ್ತು. ಯಾವ ಪಕ್ಷ ಜೋಡೆತ್ತನ್ನು, ಹಸು ಕರುವನ್ನು ತಮ್ಮ ಪಕ್ಷದ ಗುರುತಾಗಿ ಇಟ್ಟುಕೊಂಡಿತ್ತೋ ಆ ಪಕ್ಷ ಗೋಹತ್ಯೆ ನಿಷೇಧಕ್ಕೆ ಸಮರ್ಥನೆ ಮಾಡುತ್ತದೆ. ಆಹಾರ ಸಂಸ್ಕೃತಿ ಬಗ್ಗೆ ಮಾತನಾಡುತ್ತಾರೆ. ನಾಳೆ ಯಾರಾದರು ನಾನು ಮನುಷ್ಯನನ್ನು ತಿನ್ನುವುದೇ ನನಗೆ ಆಹಾರ ಎಂದರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮನುಷ್ಯನನ್ನು ತಿನ್ನುವವರನ್ನು ಬೆಂಬಲಿಸುತ್ತಾರೆ. ದೇಶದಲ್ಲಿ ಒಂದು ಸಂಸ್ಕೃತಿ ಇದೆ. ನಾನು ಅವರಿಗೆ ಕೇಳಲು ಬಯಸುತ್ತೇನೆ. ನಿಮ್ಮ ಕುಲದೈವ ಬೀರೇಶ್ವರ ಗೋಹತ್ಯೆಯನ್ನು ಸಮರ್ಥನೆ ಮಾಡುತ್ತಾರಾ..? ಬೀರೇಶ್ವರನ ವಾಹನ ಏನೂ ಎಂಬುವುದನ್ನು ನೀವು ಯೋಚನೆ ಮಾಡಿ ಎಂದು ಹೇಳಿದರು.