ಪತ್ರಿಕೋದ್ಯಮ-ಪತ್ರಕರ್ತರ ಸಂಕಷ್ಟ ಹೆಚ್ಚಿಸಿದ ಕೊರೋನಾ…!-ಭಾಗ-2

365
firstsuddi

– ಡಾ|| ಎಂ.ಎಸ್. ಮಣಿ

“ಆತ್ಮೀಯರೇ, ನನ್ನ ಆರೋಗ್ಯದಲ್ಲಿ ಬಹುತೇಕ ಸುಧಾರಣೆ ಆಗಿದೆ. ಮೂರು ದಿನದಲ್ಲಿ ಸಂಪೂರ್ಣ ಸುಧಾರಣೆ ಆಗಲಿದೆ ಎಂದು ಡಾ|| ಸುಯೋಗ ತಿಳಿಸಿದ್ದಾರೆ. ನಿಮ್ಮ ಪ್ರೀತಿಗೆ ನಾನು ಋಣಿ. ದಯವಿಟ್ಟು ನನಗೂ, ನನ್ನ ಕುಟುಂಬದವರಿಗೂ ಆರೋಗ್ಯ ವಿಚಾರಿಸಲು ಕರೆಮಾಡದಂತೆ ಕೋರುತ್ತೇನೆ. ಇದರಿಂದ ಅವರು ಆತಂಕಗೊಳ್ಳುತ್ತಾರೆ. ಇತರೆ ಪತ್ರಕರ್ತ ಮಿತ್ರರಿಗೂ ತಿಳಿಸಿ. ಅಂದಿಗೂ, ಇಂದಿಗೂ ಬಹುತೇಕ ಸುಧಾರಣೆ ಆಗಿದೆ. ಸ್ವಲ್ಪ ಕೆಮ್ಮು ಹಾಗೂ ಸುಸ್ತು ಇದೆ ಅಷ್ಟೆ. ಎಲ್ಲರ ಪ್ರೀತಿ, ವಿಶ್ವಾಸಕ್ಕೆ ಋಣಿ ಎಂಬ ಸಂದೇಶ ಕಳುಹಿಸಿದ್ದ ಮೈಸೂರಿನ ಪ್ರಜಾವಾಣಿ ವರದಿಗಾರ ಪವನ್ ಹೆತ್ತೂರು ಕೊರೋನಾದಿಂದಾಗಿ ಬಾರದ ಲೋಕಕ್ಕೆ ಹೋಗಿಬಿಟ್ಟಿದ್ದಾರೆ.’’ ಹಾಸನ ಜಿಲ್ಲೆಯ, ಸಕಲೇಶಪುರ ತಾಲ್ಲೂಕು, ಹೆತ್ತೂರಿನ ಪವನ್ ಪತ್ನಿ ಮತ್ತು ಇಬ್ಬರು ಚಿಕ್ಕವಯಸ್ಸಿನ ಮಕ್ಕಳ ಭವಿಷ್ಯದ ಬದುಕು ಕಟ್ಟಿಕೊಳ್ಳಲು ಐದು ಲಕ್ಷ ಸಾಕೇ?.

ಸೋಮಶೇಖರ್ ಯಡವಟ್ಟಿ ಸಂಯುಕ್ತ ಕರ್ನಾಟಕದ ಪ್ರಧಾನ ವರದಿಗಾರರಾಗಿದ್ದರು. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸಂದರ್ಶನವನ್ನು ಮಾಡಿದ್ದರು. ಕೊರೋನಾ ಅಂಟಿದೆಯೆಂಬ ಸಣ್ಣ ಸುಳಿವಿಲ್ಲದೆ, ಕಾರ್ಯನಿರ್ವಹಿಸುತ್ತಿರುವಾಗಲೇ ಅಸ್ವಸ್ಥರಾಗಿ ಎಂ.ಎಸ್. ರಾಮಯ್ಯ ಆಸ್ಪತ್ರೆ ಸೇರಿ ಪ್ರಾಣಬಿಟ್ಟರು. ಟೈಮ್ಸ್ ಆಫ್ ಕರ್ನಾಟಕದ ಪ್ರಧಾನ ವರದಿಗಾರರಾಗಿ, ಎರಡು ತಿಂಗಳ ಹಿಂದಷ್ಟೆ ಹುದ್ದೆ ತ್ಯಜಿಸಿ ಹವ್ಯಾಸಿ ಪತ್ರಕರ್ತರಾಗಿದ್ದ ಹಾಲಪ್ಪ ಅವರು ಕೊರೋನಾ ಸೋಂಕಿಗೆ ಗುರಿಯಾಗಿದ್ದರು. ದೇವನಹಳ್ಳಿಯ ಆಕಾಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರಾದರೂ, ಗುಣಮುಖರಾಗದೆ ನಿಧನರಾದರು. ಆಯುರ್ವೇದ ವೈದ್ಯರ ಮಗನಾಗಿ, ಇಂಜಿನಿಯರಿಂಗ್ ಪದವಿಧರನಾಗಿದ್ದ ಗೌರಿಪುರ ಚಂದ್ರು ವಿಜಯಕರ್ನಾಟಕ ದಿನಪತ್ರಿಕೆಯ `ಭೋದಿವೃಕ್ಷ’ ವಿಶೇಷ ಸಂಚಿಕೆಯ ಉಸ್ತುವಾರಿಯ ಹೊಣೆ ಹೊತ್ತಿದ್ದರು. ಇವರು ಸಹ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಮಂಡ್ಯದ ಪೌರವಾಣಿಯಿಂದ ವೃತ್ತಿ ಬದುಕು ಆರಂಭಿಸಿದ ನಾಗರಾಜ್ ದೀಕ್ಷಿತ್ ಅವರು ಜನಶ್ರೀ, ಕಸ್ತೂರಿ ವಾಹಿನಿ ಸೇರಿದಂತೆ ಹಲವೆಡೆ ಕಾರ್ಯನಿರ್ವಹಿಸಿದ್ದರು. ಜೊತೆಗೆ ರಂಗಪ್ರತಿಭೆ ಕೂಡ ಆಗಿದ್ದರು. ಇವರು ಉಸಿರಾಟದ ಸಮಸ್ಯೆಯಿಂದ ಬಳಲಿದಾಗ, ಬೆಂಗಳೂರಿನ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಅಲ್ಲಿ ದಾಖಲಿಸಿಕೊಳ್ಳಲು ವಿಳಂಬ ಮಾಡಿದ್ದರಿಂದ, `ಬಹು ಅಂಗಾಂಗ ವೈಫಲ್ಯ’ಕ್ಕೆ ಒಳಗಾಗಿ ಜೀವಬಿಟ್ಟಿದ್ದಾರೆ. ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆಯ ಕನ್ನಡಪ್ರಭ ವರದಿಗಾರರಾಗಿದ್ದ ಸಿಂಗನಹಳ್ಳಿ ಸುರೇಶ್ ಕೂಡ ಕೊರೋನಾ ಸೋಂಕಿಗೆ ಒಳಗಾಗಿ ಮರಣಿಸಿದ್ದಾರೆ. ರಾಯಚೂರಿನ ಸಿರಿವಾರ ತಾಲ್ಲೂಕಿನ ಕವಿತಾಳ ಗ್ರಾಮದ `ಸುದ್ದಿಮೂಲ’ ಪತ್ರಿಕೆಯ ವರದಿಗಾರ ಪರ್ವತಯ್ಯಸ್ವಾಮಿ ಕೊರೋನಾಗೆ ಬಲಿಯಾಗಿದ್ದಾರೆ. ದೇವನಹಳ್ಳಿಯ ಪತ್ರಕರ್ತ ಕರಾಟೆರಾಜು ಕೊರೋನಾ ಸೋಂಕಿಗೆ ಒಳಗಾಗಿ ಆಕ್ಷಿಜನ್‌ಗಾಗಿ ಆಸ್ಪತ್ರೆಯಿಂದ, ಆಸ್ಪತ್ರೆಗೆ ಅಲೆದಾಡಿ ಜೀವ ಕಳೆದುಕೊಂಡಿದ್ದಾರೆ. `ನೆಲದನಿಯ ಕಥೆಗಳು’ ಕಥಾಸಂಕಲನದ ಲೇಖಕ ಹಿರಿಯ ಪತ್ರಕರ್ತ ವಿ.ಸಿ. ಹಿರೇಮಠ್ ಅವರು ಉದಯ ಟಿ.ವಿ., ವಿಜಯವಾಣಿಯಲ್ಲಿ ಕಾರ್ಯನಿರ್ವಹಿಸಿದ್ದರು. ಇವರು ಸಹ ಕೊರೋನಾ ಸೋಂಕಿಗೆ ಆಹುತಿಯಾಗಿದ್ದಾರೆ. ಬಳ್ಳಾರಿ ಜಿಲ್ಲೆ, ಕೂಡ್ಲಿಗಿ ಪಟ್ಟಣ ಪಂಚಾಯಿತಿ ಸದಸ್ಯರು ಮತ್ತು ವಿಜಯ ಕರ್ನಾಟಕ ದಿನಪತ್ರಿಕೆಯ ವರದಿಗಾರರಾಗಿದ್ದ ಬಿ.ಎಂ. ತ್ರಿಮೂರ್ತಿ ಕೂಡ ಕೊರೋನಾ ಸೋಂಕಿಗೆ ಈಡಾಗಿ ಜೀವಕಳೆದುಕೊಂಡಿದ್ದಾರೆ. ಇದೇ ರೀತಿ ವಿಜಯ ಕರ್ನಾಟಕದ ಹಿರಿಯ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದ ಶಿವಸುಂದರ್ ದೀಕ್ಷಿತ್ ಸಹ ಕೊರೋನಾದೊಂದಿಗೆ ಸೆಣಸಾಡಿ, ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ.

ಕೊರೋನಾ ಸೋಂಕಿಗೆ ಜೀವಬಲಿ ಕೊಟ್ಟವರಲ್ಲಿ ನಮ್ಮ ರಾಜ್ಯದ ಪತ್ರಕರ್ತರು ಮಾತ್ರವಲ್ಲದೆ, ದೇಶದ ಉದ್ದಗಲಕ್ಕೂ ಇದ್ದಾರೆ. ನೆರೆಯ ತಮಿಳುನಾಡಿನಲ್ಲಿ ಪಾಲ್ಗಾರ್ ಟೈಮ್ಸ್ನ ಸಂಪಾದಕ, ಸಂಘಟಕ ಅಶೋಕ್ ಚೂರಿ ಪಾಲ್ಗಾರ್ ಗ್ರಾಮೀಣ ಆಸ್ಪತ್ರೆಯಲ್ಲಿ ಕೊರೋನಾಗೆ ಚಿಕಿತ್ಸೆ ಪಡೆದು, ವಿಫಲರಾಗಿ ಅಸುನೀಗಿದ್ದಾರೆ. ಇವರು 1,133 ಸಾಮೂಹಿಕ ವಿವಾಹಗಳನ್ನು ಮಾಡಿಸಿದ್ದರು. ರಾಜ್ ಟಿ.ವಿ.ಯ ಹಿರಿಯ ವಿಡಿಯೋಗ್ರಾಫರ್ ಇ. ವೇಲ್‌ಮುರುಗನ್ ದೇಶದಲ್ಲಿಯೇ ಅತಿದೊಡ್ಡ ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿಗೆ ಚಿಕಿತ್ಸೆಪಡೆದು, ಗುಣಮುಖರಾಗದೆ ಬಲಿಯಾಗಿದ್ದಾರೆ. ತಮಿಳುನಾಡಿನಲ್ಲಿ ಕೊರೋನಾಗೆ ಜೀವಕೊಟ್ಟ ಮೊದಲ ಪತ್ರಕರ್ತ ಇವರಾಗಿದ್ದಾರೆ. ವಿನ್ ಟಿ.ವಿ., ಕಲೈಗ್ನರ್ ಟಿ.ವಿ. ಮತ್ತು ವಿಜಯ ಟಿ.ವಿ.ಗಳಲ್ಲಿ ಕಾರ್ಯನಿರ್ವಹಿಸಿದ್ದ ಫ್ಲೊರೆಂಟ್ ಸಿಪರೈರಾ ಕೊರೋನಾ ಸೋಂಕಿಗೆ ಶರಣಾಗಿ ಉಸಿರುಬಿಟ್ಟಿದ್ದಾರೆ. ಇವರು ಕಾಯಲ್, ತೊಡಾರಿ, ಕೋಡಿವೀರನ್, ಧರ್ಮದುರೈ, ವಿಐಪಿ-2 ಚಲನಚಿತ್ರಗಳಲ್ಲಿ ನಟಿಸಿದ್ದರು.

ಖಾಸಗಿ ಸುದ್ದಿವಾಹಿನಿಯೊಂದರ ವಿಡಿಯೋಗ್ರಾಫರ್ ಆಗಿದ್ದ ಪಾರ್ಥಸಾರಥಿ ಕೊರೋನಾಗೆ ಬಲಿಯಾದ ತಿರುಪತಿಯ ಮೊದಲ ಪತ್ರಕರ್ತ. ಕಡಪ ಮೂಲದ ಮಧುಸೂದನ್ ರೆಡ್ಡಿ ಆನ್‌ಲೈನ್ ಸುದ್ದಿವಾಹಿನಿಯೊಂದರ ವರದಿಗಾರರಾಗಿದ್ದರು. ಇವರು ಕೊರೋನಾ ಸೋಂಕಿಗೆ ಒಳಗಾಗಿ ಫಾತಿಮಾ ಮೆಡಿಕಲ್ ಕಾಲೇಜಿಗೆ ದಾಖಲಾಗಿದ್ದರು. ಅಲ್ಲಿನ ಅವ್ಯವಸ್ಥೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದರಿಂದ ತಿರುಪತಿಯ ಆಸ್ಪತ್ರೆಗೆ ವರ್ಗಾಯಿಸಿದರಾದರೂ, ಚಿಕಿತ್ಸೆ ಫಲಕಾರಿಯಾಗದೆ ಪ್ರಾಣಬಿಟ್ಟರು. ಇನ್ನೂ ಹೈದರಾಬಾದ್‌ನಲ್ಲಿ ಡಿ. ಮನೋಜ್‌ಕುಮಾರ್ ತೆಲುಗು ಸುದ್ದಿವಾಹಿನಿಯೊಂದರ ಕ್ರೈಂ ವರದಿಗಾರರಾಗಿದ್ದರು. ಇವರಿಗೆ ಕೊರೋನಾ ಅಂಟಿತ್ತು. ಇವರು ಉಸಿರಾಟದ ಸಮಸ್ಯೆಯಲ್ಲಿದ್ದಾಗ ಆಕ್ಸಿಜನ್ ಮತ್ತು ಐ.ಸಿ.ಯು.ನಲ್ಲಿ ಹಾಸಿಗೆ ದೊರಕದೆ ತೆಲಂಗಾಣದ ಗಾಂಧಿ ಸರ್ಕಾರಿ ಆಸ್ಪತ್ರೆಯಲ್ಲಿ ಗತಿಸಿದ್ದಾರೆ. ಇವರು ಚಿಕಿತ್ಸೆ ಪಡೆಯುವಾಗ ಐ.ಸಿ.ಯು.ನಲ್ಲಿ ಆಕ್ಸಿಜನ್, ಹಾಸಿಗೆಗಳು ಕೂಡ ಲಭ್ಯವಿರಲಿಲ್ಲ. ಖಾಸಗಿ ಆಸ್ಪತ್ರೆಗೆ ದಾಖಲಿಸಿ ಎಂಬ ಸಂದೇಶ ರವಾನಿಸಿದ್ದರಂತೆ. ಆಸ್ಪತ್ರೆಸಿಬ್ಬಂದಿ ವಿಟಮಿನ್ ಮಾತ್ರೆಗಳನ್ನು ನುಂಗಿಸಿದ್ದಾರೆಯೇ ಹೊರತು ಆಕ್ಸಿಜನ್ ಕೊಡುವುದರತ್ತ ಗಮನ ಕೊಟ್ಟಿಲ್ಲವಂತೆ. ಈತ ಕೂಡ ಪವನ್ ಹೆತ್ತೂರ್‌ರಂತೆ 35ರ ಆಸುಪಾಸಿನ ನತದೃಷ್ಟ. ಇನ್ನೇನು ಕೆಲವೇ ದಿನಗಳಲ್ಲಿ ತಂದೆಯಾಗಲಿದ್ದ. ಈತನ ಸಹೋದರಿ ಮತ್ತು ಆಕೆಯ ಪತಿ ಕೂಡ ಕೆಲವೇ ದಿನಗಳ ಹಿಂದೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಇದನ್ನು `ದುರಂತ’ ಎಂದು ಬಣ್ಣಿಸುವುದು ಕಡಿಮೆಯೇ ಆದೀತು. ನೆಲ್ಲೂರಿನ ಪತ್ರಕರ್ತ ನಾರಾಯಣಂ ಶೇಷಾಚಾರ್ಯಲು, ವಿಡಿಯೋ ಜರ್ನಲಿಸ್ಟ್ ಎಂ. ಪಾರ್ಥಸಾರಥಿ ಕೂಡ ಕೊರೋನಾದಿಂದಾಗಿ ಪ್ರಾಣ ಬಿಟ್ಟಿರುತ್ತಾರೆ. ಹೀಗೆ ಆಂಧ್ರದಲ್ಲಿ ಅಂದಾಜು 38 ಜನ ಪತ್ರಕರ್ತರು ಕೊರೋನಾಗೆ ಬಲಿಯಾಗಿದ್ದಾರೆ.

ಮಧ್ಯಪ್ರದೇಶದ ಇಂದೋರ್‌ನಲ್ಲಿ ಪಂಚತಂತ್ರ ದಿನಪತ್ರಿಕೆಯ ಸಂಪಾದಕ ಮನೋಜ್ ಬಿನ್‌ವಾಲಾ ಕೊರೋನಾ ಸೋಂಕನ್ನು ಜಯಿಸಲಾಗದೆ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಇವರು ದೈನಿಕ ಭಾಸ್ಕರ್‌ನ ಸಂವಾಹಕರಾಗಿಯೂ ಕರ್ತವ್ಯನಿರ್ವಹಿಸಿದ್ದರು. ಗುರು ಗ್ರಾಮದ ವೇದಾಂತ ಆಸ್ಪತ್ರೆಯಲ್ಲಿ ಕೊರೋನಾಗೆ ಚಿಕಿತ್ಸೆ ಪಡೆಯುವಾಗ ಫಲಕಾರಿಯಾಗದೆ ದೈನಿಕ ಜಾಗರಣ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಮಿ ಆಧಾರ್ ನಿಧಾರ್ ಮರಣಿಸಿದ್ದಾರೆ. ಕೊರೋನಾ ಸೋಂಕನ್ನು ಗುಣಪಡಿಸಿಕೊಳ್ಳಲು ಚಿಕ್ಕಲತನಾ ಕೋವಿಡ್ ಸೆಂಟರ್‌ಗೆ ದಾಖಲಾಗಿದ್ದ ಔರಂಗಬಾದ್‌ನ ಹಿರಿಯ ಪತ್ರಕರ್ತ ರಾಹುಲ್ ಹೋಲರೆ ಕೂಡ ಪ್ರಾಣ ಬಿಟ್ಟಿದ್ದಾರೆ. ದೈನಿಕ್ ಭಾಸ್ಕರ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮತ್ತೋರ್ವ ಹಿರಿಯ ಪತ್ರಕರ್ತ ಹರೀಶ್ ಚುಜಿ ಕೂಡ ಸೋಂಕನ್ನು ಜಯಿಸಲಾಗದೆ ಅಸುನೀಗಿದ್ದಾರೆ.

ಇನ್ನೂ ಬಾಂಬೆ ಮೂಲದ ಸಿನಿಮಾ ಪತ್ರಕರ್ತ ಶ್ಯಾಂ ಶರ್ಮ, ಪುಣೆಯ ಖಾಸಗಿ ವಾಹಿನಿಯೊಂದರ ವರದಿಗಾರ ಪಾಂಡುರಂಗ ರಾಯಕರ್, ಖಾನ್‌ಪುರ ಮೂಲದ ಟಿ.ವಿ. ಪತ್ರಕರ್ತ ನೀಲಾಂಶು ಶುಕ್ಲ, ಪಾಟಿಯಾಲ ಮೂಲದ ಫೋಟೋ ಜರ್ನಲಿಸ್ಟ್ ಜೈದೀಪ್, ಗೋರಖ್‌ಪುರದ ಫೋಟೋ ಜರ್ನಲಿಸ್ಟ್ ರಾಜೀವ್ ಚೇತನ್ ಖೇತನ್ ಕೊರೋನಾ ವೈರಾಣುವಿನಿಂದಾಗಿ ಜೀವಬಿಟ್ಟಿದ್ದಾರೆ. ಕೊಲ್ಕತ್ತಾ ಮೂಲದ ಫೋಟೋ ಜರ್ನಲಿಸ್ಟ್ ರೊಣಿರಾಯ್ ಕೊರೋನಾ ಸೋಂಕಿಗೆ ಬಲಿಯಾದ ಮೊದಲ ಪತ್ರಕರ್ತನಾಗಿರಬೇಕು. ನವದೆಹಲಿಯ ಪತ್ರಕರ್ತ ತರುಣ್ ಸಿಸೋಡಿಯಾ ಕೊರೋನಾಗೆ ಏಮ್ಸ್ ನಂತಹ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ, ಖಿನ್ನತೆಗೆ ಒಳಗಾಗಿ ಸಾವಿಗೆ ಶರಣಾಗಿದ್ದಾರೆ. ಗುಹವಾಟಿಯ ಅಸೋಮಿಯಾಖ್ಹಬಾರ್‌ನ ಮುದ್ರಕ, ಪ್ರಕಾಶಕ ರಾಂತುದಾಸ್ ಗತಿಸಿದ್ದಾರೆ. ಹಾಗೆಯೇ ಆಲ್ ಇಂಡಿಯಾ ರೇಡಿಯೋದಲ್ಲಿ ವಾರ್ತವಾಚಕರಾಗಿದ್ದ ಗೋಪಾಲ್ ಸೈಕಿಯಾ ಕೂಡ ಕೊರೋನಾವನ್ನು ಮಣಿಸಲಾಗದೆ ಜೀವಬಿಟ್ಟಿದ್ದಾರೆ.

ಪಂಜಾಬಿನಲ್ಲಿ ಅತಿಹೆಚ್ಚು ಪ್ರಸಾರ ಹೊಂದಿರುವ ಪಂಜಾಬ್ ಕೇಸರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಲೂಧಿಯಾನ ಮೂಲದ ಪತ್ರಕರ್ತ ಅಶ್ವಿನಿ ಕಪೂರ್ ಕೊರೋನಾ ಸೋಂಕಿಗೆ ಒಳಗಾಗಿ ಜೀವಬಿಟ್ಟಿದ್ದಾರೆ. `ಸಚ್ ಕಾನೂನು’ ಪತ್ರಿಕೆಯ ಹಿರಿಯ ಪತ್ರಕರ್ತ ನರೇಶ್ ಬಜಾಜ್ ಕೂಡ ಕೊರೋನಾಗೆ ಜೀವಕೊಟ್ಟಿದ್ದಾರೆ. ಚಂಡೀಘಡದ ಸುದ್ದಿವಾಚಕ ರವೀಂದರ್ ಪಾಲ್‌ಸಿಂಗ್, ಆಗ್ರಾದ ಪತ್ರಕರ್ತ ಪಂಕಜ್ ಕುಲಶ್ರೇಷ್ಠ, ಒರಿಸ್ಸಾದ ಸಿಂಹಾಚಲ ಪಾಂಡಾ, ಪ್ರಿಯದರ್ಶಿನಿ ಪಾಟ್ನಾಯಕ್ ಅವರುಗಳು ಕೂಡ ಕೊರೋನಾ ವೈರಾಣುಗೆ ಬಲಿಯಾಗಿದ್ದಾರೆ.

ಹಸಿರು ಕ್ರಾಂತಿಯ ಚಳವಳಿಗಾರ, ದಶಕಕ್ಕೂ ಹೆಚ್ಚು ಕಾಲ ದಿನಪತ್ರಿಕೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ದಾನೇಶ್ವರ ರಬ್ಬ ಕೂಡ ಕೊರೋನಾದಿಂದ ಮರಣಿಸಿದ್ದಾರೆ. ಇವರು ಈಶಾನ್ಯ ಭಾರತದಲ್ಲಿ ಬಲಿಯಾದ ಮೊದಲ ಪತ್ರಕರ್ತ. ಯುನೈಟೆಡ್ ನ್ಯೂಸ್ ಆಫ್ ಇಂಡಿಯಾದ ಅನಿಲ್ ಶ್ರೀವಾಸ್ತವ್ ಕೂಡ ಕೋವಿಡ್‌ಗೆ ಬಲಿಯಾಗಿದ್ದಾರೆ.

ಹೀಗೆ ದೇಶದೆಲ್ಲೆಡೆ ಪತ್ರಿಕೆಗಳು ಪ್ರಕಟಣೆಯನ್ನು ಕಾಣದೆ, ಪತ್ರಕರ್ತರು ಜೀವಬಿಡುತ್ತಲಿದ್ದಾಗಲೂ ನಯಾಪೈಸೆಯ ಯೋಜನೆಯನ್ನೂ ನೀಡದೆ, ಪತ್ರಕರ್ತರನ್ನು ಕೊರೋನಾ ವಾರಿಯರ್ಸ್ ಎಂದು ಘೋಷಿಸದೆ ನಿರ್ಲಕ್ಷಿಸಲಾಗಿದೆ. ಇವತ್ತು ಮುದ್ರಣ ವೆಚ್ಚವೂ ಅಧಿಕವಾಗಿದೆ. ಓದುಗರ ಸಂಖ್ಯೆಯೂ ಇಳಿಮುಖವಾಗಿದೆ. ಜಾಹೀರಾತಿನ ಕೊರತೆಯೂ ಕಾಣಿಸಿಕೊಂಡಿದೆ. ಇವೆಲ್ಲವೂ ಕೂಡಿ ಹಲವಾರು ಪತ್ರಿಕೆಗಳನ್ನು ಮುಚ್ಚಿಹಾಕಿವೆ. ಇದರಿಂದಾಗಿ ಕೆಲವು ಪತ್ರಿಕಾ ಸಂಸ್ಥೆಗಳು ಪತ್ರಕರ್ತರನ್ನು ಕೆಲಸದಿಂದ ನಿಲ್ಲಿಸಿವೆ. ಇವರ ಜೊತೆಗೆ ಕೆಲವು ದೃಶ್ಯಮಾಧ್ಯಮಗಳು ಕೂಡ ಪತ್ರಕರ್ತರನ್ನು ಹೊರಗಟ್ಟಿದೆ. ಕೆಲವು ವೇತನ ಕಡಿಮೆ ಮಾಡಿದೆ. ಕೆಲವರು ಧ್ವನಿ ಎತ್ತಿ ಪ್ರಶ್ನಿಸಿದ್ದಾರೆ. ಇನ್ನೂ ಕೆಲವರು ನಡುಬಗ್ಗಿಸಿ ದುಡಿಯುತ್ತಿದ್ದಾರೆ. ಹಲವು ರಾಜ್ಯಗಳಲ್ಲಿ ಪತ್ರಿಕೆಗಳು ತನ್ನ ಆವೃತ್ತಿಗಳನ್ನು ನಿಲ್ಲಿಸಿವೆ. ಇದಕ್ಕೆ ಜಾಹೀರಾತು ಕೊರತೆಯ ಕಾರಣವನ್ನು ನೀಡಿವೆ.

ಇವೆಲ್ಲದರ ನಡುವೆಯೂ ನನಗೆ ಪ್ರಕೃತಿಯ ಗುಟ್ಟಾದ ಫಾರ್ಮೆಷನ್, ಡಿಫಾರ್ಮೆಷನ್ ಮತ್ತು ರಿಫಾರ್ಮೆಷನ್ ಬಗ್ಗೆ ನಂಬಿಕೆ ಇದೆ. ಇದರಂತೆಯೇ ಬಿಕ್ಕಟ್ಟು, ವಿಪತ್ತು, ಪ್ರಳಯ ಪುನರಾವರ್ತನೆಗೊಳ್ಳುವ ಗುಣವನ್ನು ಹೊಂದಿರುತ್ತದೆ. ಪುನರಾವರ್ತನೆಗೊಂಡಾಗಲೆಲ್ಲ ನಮ್ಮ ಆದ್ಯತೆಗಳು ಸಹಜವಾಗಿ ಹಿಂದಕ್ಕೆ ಸರಿಯುತ್ತವೆ. ಉದಾಹರಣೆಗೆ 1914-1919ರಲ್ಲಿ ಮೊದಲ ಮಹಾಯುದ್ಧ ನಡೆದಿತ್ತು. 1939-1945ರಲ್ಲಿ ಎರಡನೇ ಮಹಾಯುದ್ಧವೂ ನಡೆದಿತ್ತು. ಆ ಸಂದರ್ಭಗಳಲ್ಲಿಯೂ ಪತ್ರಿಕೋದ್ಯಮ ಬಹಳ ಸಂಕಷ್ಟ ಎದುರಿಸಿತ್ತು. ಹಲವು ಪತ್ರಿಕೆಗಳು ತಮ್ಮ ಪ್ರಸಾರವನ್ನೇ ನಿಲ್ಲಿಸಿದ್ದವು. ಕೆಲವು ಮುದ್ರಣವಾದರೂ ಹೊರಬರುತ್ತಿರಲಿಲ್ಲ. ವರ್ಷಗಳ ಕಾಲ ಓದುಗರು ಪತ್ರಿಕೆ ಓದುವುದನ್ನೇ ನಿಲ್ಲಿಸಿದ್ದರು. ಯುದ್ಧ ನಿಂತ ಬಳಿಕ ಯಥಾಪ್ರಕಾರ ಪತ್ರಿಕೆಗಳು ತನ್ನ ಪ್ರಸಾರವನ್ನು ಕಂಡಿತು. ಇಂದಿನ ಪರಿಸ್ಥಿತಿಯೇ ಬೇರೆ, ಅಂದಿನ ಪರಿಸ್ಥಿತಿಯೇ ಬೇರೆ ಎಂಬ ಪ್ರಶ್ನೆ ಕೆಲವರಲ್ಲಿ ಮೂಡಿರಬಹುದು. ಹೌದು ಅಂದು ಪತ್ರಿಕೆಗಳು ಪ್ರಸಾರ ನಿಂತಾಗ ಓದಲು ಆಗುತ್ತಿರಲಿಲ್ಲ. ಇಂದು ಪತ್ರಿಕೆಗಳು ಪ್ರಸಾರ ನಿಂತರೂ ಆನ್‌ಲೈನ್‌ನಲ್ಲಿ ವೀಕ್ಷಿಸಬಹುದಾಗಿದೆ. ಇದೇನೆ ಇದ್ದರೂ ವೃತ್ತಪತ್ರಿಕೆ `ದ್ರಾಕ್ಷಾರಸ’ ಇದ್ದಂತೆ. ಹಳೆಯದಾದರೂ ಅದಕ್ಕೆ ಬೇಡಿಕೆ ಇದ್ದೇ ಇದೆ.

ಕೊರೋನಾ ಸೋಂಕು ಇಳಿಕೆಯಾದ ನಂತರ ವೃತ್ತಪತ್ರಿಕೆಗಳು ಮತ್ತೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಸಾರವನ್ನು ಕಾಣಲಿದೆ. ಜೊತೆಗೆ ಆನ್‌ಲೈನ್ ಆವೃತ್ತಿಗೆ ಸರಿಸಮಾನವಾಗಿ ಪೈಪೋಟಿಯನ್ನು ನೀಡುತ್ತದೆ. ಇದು ಸಾಧ್ಯವೇ ಎಂದೆನಿಸಬಹುದು. ಖಂಡಿತವಾಗಿಯೂ ಸಾಧ್ಯವಿದೆ. `ಆನ್‌ಲೈನ್ ಆವೃತ್ತಿ’ಗೂ ನರನೇತ್ರ ವಿಜ್ಞಾನಕ್ಕೂ ಸಂಬಂಧ ಇದೆ. ಆನ್‌ಲೈನ್‌ನಲ್ಲಿ ಪತ್ರಿಕೆ ಓದುವುದರಿಂದ ಕಣ್ಣು ಮತ್ತು ಮೆದುಳು ಎರಡು ಸಮನ್ವಯತೆಯಿಂದ ಕೆಲಸ ಮಾಡಬೇಕಾಗುತ್ತದೆ. ಇದರಿಂದ ಕಣ್ಣಿನ ಮೇಲೆ ಬಹಳ ಒತ್ತಡ ಬೀಳುತ್ತದೆ. ಅಲ್ಲದೆ, ಅಧ್ಯಯನದ ಪ್ರಕಾರವೂ ಓದುವ ವಿಷಯ ಸುಗಮವಾಗಿರುವುದಿಲ್ಲ. ಪದೆ, ಪದೆ ಅಡಚಣೆ ಇದ್ದೇ ಇರುತ್ತದೆ. ಪತ್ರಿಕೆಯನ್ನು ಕೈಯಲ್ಲಿ ಹಿಡಿದು ಓದುವುದರಿಂದ ಆಹ್ಲಾದಕರವಾಗಿರುತ್ತದೆ. ಬರಹದ ರೂಪವನ್ನು ಮೆದುಳು ಸುಲಭವಾಗಿ, ವೇಗವಾಗಿ ಗ್ರಹಿಸುತ್ತದೆ. ಹೀಗಾಗಿ ಹಾಳೆಯ ಮೇಲೆ ಮುದ್ರಿತವಾದ ಅಕ್ಷರಗಳಿಗೂ ಮತ್ತು ಪರದೆಯ ಮೇಲೆ ಮೂಡುವ ಅಕ್ಷರಗಳಿಗೂ ಬಹಳಷ್ಟು ವ್ಯತ್ಯಾಸ ಇರುತ್ತದೆ. ಮುದ್ರಣ ಪತ್ರಿಕೆಗಳಿಂದ ನೆನಪಿಟ್ಟುಕೊಳ್ಳಲು ಅನುಕೂಲವಾಗುತ್ತದೆ.

ಹಿರಿಯ ಪತ್ರಕರ್ತರಾದ ಜಿ.ಕೆ. ಸತ್ಯ,ಲಕ್ಷ್ಮಣ ಕೊಡಸೆ, ಸಿದ್ದರಾಜು, ಗಂಗಾಧರ ಮೊದಲಿಯಾರ್, ಐ.ಎಚ್. ಸಂಗಮದೇವ, ವೆಂಕಟೇಶ ಪ್ರಸಾದ್, ರುದ್ರಣ್ಣ ಹರ್ತಿಕೋಟೆ   ಲಕ್ಷ್ಮೀನಾರಾಯಣ,  ಎಸ್. ಸತೀಶ್, ಮಂಜುನಾಥ ಬೊಮ್ಮನಕಟ್ಟಿ, ಅಭಿಮನ್ಯು ರಮೇಶ್, ವೆಂಕಟಸಿಂಗ್ , ಸೋಮಣ್ಣ , ಅವರುಗಳ ಪ್ರಕಾರ ವೃತ್ತಪತ್ರಿಕೆ ಓದುವುದರಿಂದ ಓದುಗರಿಗೆ ಸಮಗ್ರ ಸಂಪೂರ್ಣತೆ ದೊರಕುತ್ತದೆ. ವೃತ್ತಪತ್ರಿಕೆಗಳ ವಿಚಾರಗಳು ಓದುಗರ ಅಂತರ್‌ದೃಷ್ಟಿಯನ್ನು ಪ್ರಖರಗೊಳಿಸುತ್ತದೆ. ಹಾಗೂ ವ್ಯಕ್ತಿತ್ವವನ್ನು ಉದ್ದೀಪನಗೊಳಿಸುತ್ತದೆ. ಅಲ್ಲದೆ ಓದುವ ಹಸಿವನ್ನು ಹೆಚ್ಚಾಗಿಸುತ್ತಾ ಬೌದ್ಧಿಕತೆಯ ಅರಿವನ್ನುಂಟುಮಾಡಿಸುತ್ತದೆ. ಹೀಗಾಗಿ ವೃತ್ತಪತ್ರಿಕೆಗೆ ಚರಮಗೀತೆ ಹಾಡುವುದನ್ನು ಬಿಡಿ. ಕೊರೋನಾ ಸೋಂಕು ತಗ್ಗಿದೊಡನೆ ಪತ್ರಿಕೋದ್ಯಮದ ಗತವೈಭವ ಮತ್ತೆ ಪ್ರಾರಂಭವಾಗುತ್ತದೆ.

ಇದರ ನಡುವೆಯೂ ನನ್ನಲ್ಲೊಂದು ನೋವಿದೆ. ಪತ್ರಕರ್ತರು ಕೊರೋನಾ ಸೋಂಕಿಗೆ ಗುರಿಯಾದಾಗ ಪತ್ರಿಕಾ ಸಂಸ್ಥೆಗಳು ತಮ್ಮ ಸಂಸ್ಥೆಯ ಉದ್ಯೋಗಿ ಸೋಂಕಿತ ಎಂದು ಪ್ರಕಟಿಸಲು ಸಿದ್ಧರಿದ್ದಂತೆ ಕಂಡುಬರಲಿಲ್ಲ. ಪ್ರಕಟಿಸಿದರೆ ಎಲ್ಲಿ ಇತರೆ ಸಿಬ್ಬಂದಿವರ್ಗ ಆತಂಕಕ್ಕೆ ಒಳಗಾಗಿ ಕೆಲಸ ಬಿಡುವರೆಂಬ ಹೆದರಿಕೆಗೂ ಒಳಗಾಗಬಹುದೆಂಬ ದುರಾಲೋಚನೆಯನ್ನು ಪತ್ರಿಕೆಗಳ ಮಾಲೀಕರು ಹೊಂದಿರಬಹುದೆನಿಸುತ್ತದೆ. ಈ ಧೋರಣೆ ಬದಲಾಗಲಿ ಎಂದು ಆಶಿಸುವೆ.