ಹುಬ್ಬಳ್ಳಿ : ರಾಜ್ಯ ಸರ್ಕಾರದ ಮೇಲೆ 40 ಪರ್ಸಂಟೇಜ್ ಆರೋಪ ಕೇಳಿ ಬರುತ್ತಿರುವ ವೇಳೆಯಲ್ಲಿಯೇ ಈಗ ಇಂತದ್ದೇ ಮತ್ತೊಂದು ಪ್ರಕರಣ ಹೊರಬಂದಿದೆ. ಗುತ್ತಿಗೆದಾರ ಅಧಿಕಾರಿಗಳ ಪರ್ಸಂಟೇಜ್ ಡಿಮ್ಯಾಂಡ್ ನಿಂದ ಬೇಸತ್ತು ದಯಾಮರಣಕ್ಕಾಗಿ ಮನವಿ ಮಾಡಿದ್ದಾರೆ.
ಹುಬ್ಬಳ್ಳಿ ಮೂಲದ ಬಸವರಾಜ್ ದಯಾಮರಣಕ್ಕಾಗಿ ಅರ್ಜಿ ಸಲ್ಲಿಸಿದ ಗುತ್ತಿಗೆದಾರನಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಕಡೂರು ಮತ್ತು ಮೂಡಗೆರೆ ತಾಲೂಕಿನ ಗ್ರಾಮ ಪಂಚಾಯಿತಿಗಳಿಗೆ ಗುತ್ತಿಗೆದಾರ ಬಸವರಾಜ್ 2020-21ರಲ್ಲಿ ಕೋವಿಡ್ ಪರಿಕರಗಳನ್ನ ಸರಬರಾಜು ಮಾಡಿದ್ದರು. ಅದರಲ್ಲಿ ಮೂಡಗೆರಿ ತಾಲೂಕಿಗೆ 27 ಲಕ್ಷ ಕಡೂರು ತಾಲೂಕಿಗೆ 85 ಲಕ್ಷ ರೂಪಾಯಿಯ ಪರಿಕರ ಪೂರೈಕೆ ಮಾಡಿದ್ದರು. ಆದರೆ ಸರಬರಾಜು ಮಾಡಿ 2 ವರ್ಷ ಗತಿಸಿದರೂ ಬಿಲ್ ಪಾವತಿ ಮಾಡದೆ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು ಸತಾಯಿಸುತ್ತಿದ್ದಾರೆಂದು ಬಸವರಾಜ್ ಆರೋಪಿಸಿದ್ದಾರೆ.
ಬಿಲ್ ಪಾವತಿ ಮಾಡಲು ಕಡೂರು ಇಓ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ. ಅಲ್ಲದೆ ಕಡೂರು ಬಿಜೆಪಿ ಶಾಸಕ ಬೆಳ್ಳಿ ಪ್ರಕಾಶ ಹೆಸರಿನಲ್ಲಿ 40 ಪರ್ಸಂಟೇಜ್ ಗಿಂತ ಹೆಚ್ಚಿನ ಹಣಕ್ಕೆ ಕಡೂರು ಇಓ ದೇವರಾಜ್ ನಾಯಕ್ ಬೇಡಿಕೆ ಇಟ್ಟಿದ್ದಾರೆಂಬ ಆರೋಪ ಕೇಳಿಬಂದಿದೆ. ಮುಖ್ಯಮಂತ್ರಿ ಬೊಮ್ಮಾಯಿ ಅವರ ಕಾರ್ಯಾಲಯದಿಂದಲೂ ಆದೇಶ ಬಂದರೂ ಡೋಂಟ್ ಕೇರ್ ಅನ್ನುತ್ತಿದ್ದಾರೆ. ಮತ್ತೊಂದು ಕಡೆ ಬಸವರಾಜ್ ಗೆ ಸಾಲಗಾರರ ಕಾಟ ಸಹ ಹೆಚ್ಚಾಗಿದ್ದು, ಇದರಿಂದ ಮಾನಸಿಕವಾಗಿ ನೊಂದ ಗುತ್ತಿಗೆದಾರ ದಯಾಮರಣ ಕೋರಿ ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೆ ಪ್ರಧಾನಿ ಮೋದಿ, ರಾಜ್ಯಪಾಲ ಮತ್ತು ಮುಖ್ಯಮಂತ್ರಿಗಳಿಗೆ ಅರ್ಜಿ ಬರೆದಿದ್ದಾರೆ. ಒಟ್ಟಿನಲ್ಲಿ ಸರ್ಕಾರದ 40 ಪರ್ಸಂಟೇಜ್ ವ್ಯವಹಾರಕ್ಕೆ ಈ ಘಟನೆ ಪುಷ್ಠಿ ನೀಡುವಂತಿದೆ.










