ಪಾತ್ರೆ ತೊಳೆಯಲು ಹೋಗಿದ್ದ ಮಕ್ಕಳಿಬ್ಬರು ನೀರುಪಾಲು…

72
firstsuddi

ಆನೇಕಲ್ : ಪಾತ್ರೆ ತೊಳೆಯಲು ಹೊಗಿದ್ದ ಇಬ್ಬರು ಮಕ್ಕಳು ಕೃಷಿ ಹೊಂಡದಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಟಿ.ಅಗ್ರಹಾರ ಗ್ರಾಮದಲ್ಲಿ ನಡೆದಿದ್ದು, ಶ್ರಾವಣಿ (12), ಅರ್ಚನಾ (9) ಮೃತ ಮಕ್ಕಳು.

ಇಬ್ಬರು ಹೆಣ್ಣು ಮಕ್ಕಳ ಪೋಷಕರು ಬಡ ಕುಟುಂಬದವರಾಗಿದ್ದು, ಗ್ರಾಮದ ಹೊರ ಭಾಗದಲ್ಲಿ ಮನೆ ಕಟ್ಟಿಕೊಂಡು ಕೃಷಿಯ ಜತೆಗೆ ಕೂಲಿ ಕೆಲಸ ಮಾಡುತ್ತಿದ್ದರು. ಮಂಗಳವಾರ ಮಕ್ಕಳನ್ನು ಬಿಟ್ಟು ತಾಯಿ ಕೂಲಿ ಕೆಲಸಕ್ಕೆ ಹೋಗಿದ್ದು, ಶಾಲೆಗೆ ಹೋಗದೆ ಮಕ್ಕಳಿಬ್ಬರು ಮನೆಯಲ್ಲಿ ಇದ್ದರು ಎನ್ನಲಾಗಿದೆ.

ಮನೆಗೆ ಹೊಂದಿಕೊಂಡಿರುವ ಕೃಷಿ ಹೊಂಡದ ಬಳಿ ಪಾತ್ರೆಗಳನ್ನು ತೊಳೆಯಲೆಂದು ಹೋಗಿದ್ದಾಗ ಅರ್ಚನಾ ಹೊಂಡದಲ್ಲಿ ಬಿದ್ದಿದ್ದಾಳೆ. ಈಕೆಯನ್ನು ರಕ್ಷಣೆ ಮಾಡಲು ಹೋಗಿ ಅಕ್ಕ ಶ್ರಾವಣಿ ಕೂಡ ಹೊಂಡದಲ್ಲಿ ಬಿದ್ದು ಇಬ್ಬರೂ ಮೃತಪಟ್ಟಿದ್ದಾರೆ. ಮಕ್ಕಳು ಕಾಣದೇ ಇದ್ದಾಗ ಗಾಬರಿಗೊಂಡು ಹುಡುಕಾಟ ನಡೆಸಿದಾಗ ಹೊಂಡದ ತಳ ಭಾಗದಲ್ಲಿ  ಪತ್ತೆಯಾಗಿದ್ದಾರೆ. ನಂತರ ಮಕ್ಕಳಿಬ್ಬರನ್ನು ಹೊರ ತೆಗೆದಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.