ಬೆಲೆ ನಿಗದಿ ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿ ಇಲ್ಲ : ಶೋಭಾ ಕರಂದ್ಲಾಜೆ.

64
firstsuddi

ಉಡುಪಿ : ಪೆಟ್ರೋಲಿಯಮ್ ಉತ್ಪನ್ನಗಳು ನಮ್ಮ ದೇಶದಲ್ಲಿ ಉತ್ಪಾದನೆಯಾಗುವ ಪದಾರ್ಥವಲ್ಲ. ಬೆಲೆ ನಿಗದಿ ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿ ಇಲ್ಲ ಎಂದು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಉಡುಪಿ ಕೃಷ್ಣ ಮಠ ಭೇಟಿಗೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏರುಪೇರಾದಾಗ ದರ ವ್ಯತ್ಯಾಸ ಆಗುತ್ತದೆ. ಕಳೆದ ಹಲವಾರು ವರ್ಷಗಳಿಂದ ಈ ರೀತಿಯಾಗುತ್ತಿದೆ. ಇದು ಕೇವಲ ನಮ್ಮ ಸರ್ಕಾರ ಮಾತ್ರವಲ್ಲ ಆಯಾ ಸರ್ಕಾರಗಳ ಅವಧಿಯಲ್ಲೂ ಹೀಗೆಯೇ ಆಗಿದೆ. ಪೆಟ್ರೋಲ್ ದರ ಆಧರಿಸಿ ಇತರ ಪದಾರ್ಥಗಳ ಬೆಲೆ ಏರಿಕೆಯಾಗುತ್ತದೆ. ದೀಪಾವಳಿಯ ಸಂದರ್ಭದಲ್ಲಿ ಹೊಸ ಕೊಡುಗೆ ಘೋಷಣೆ ಮಾಡಿದೆ. ದರ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂಬ ಅಪೇಕ್ಷೆ ಇದೆ. ದರ ಕಡಿಮೆಯಾಗಿದೆ ಅದು ಹಾಗೆಯೇ ಉಳಿಯಬೇಕು ಮತ್ತು ನಮ್ಮ ಗ್ರಾಹಕರಿಗೆ ಒಳ್ಳೆಯದಾಗಬೇಕು ಪ್ರಧಾನಿಯವರು ಒಳ್ಳೆಯ ಕೊಡುಗೆ ನೀಡಿದ್ದಾರೆ ಎಂದರು.

ಉಪಚುನಾವಣೆ ಫಲಿತಾಂಶ ವಿಚಾರದಲ್ಲಿ ಪ್ರತಿಕ್ರಿಯಿಸಿದ ಸಚಿವೆ, ಚುನಾವಣೆಯ ಫಲಿತಾಂಶ ಈಗ ವಿಶ್ಲೇಷಣೆ ಮಾಡಲು ಸಾಧ್ಯವಿಲ್ಲ. ಎರಡು ಪಕ್ಷಗಳು ತಲಾ ಒಂದು ಸ್ಥಾನ ಗೆದ್ದಿವೆ, ಪ್ರಜಾತಂತ್ರದಲ್ಲಿ ಜನರ ತೀರ್ಪನ್ನು ನಾವು ಸ್ವಾಗತಿಸಬೇಕು. ಹೋಲಿಕೆ ಮಾಡಲು ಹೋದರೆ ಸಿಂದಗಿಯಲ್ಲಿ ನಾವು ದೊಡ್ಡ ಅಂತರದಲ್ಲಿ ಗೆದ್ದಿದ್ದೇವೆ ಉಪಚುನಾವಣೆಯಲ್ಲಿ ಇಷ್ಟು ದೊಡ್ಡ ಪ್ರಮಾಣದ ಅಂತರ ಸುಲಭದ ವಿಚಾರವಲ್ಲ. ಓರ್ವ ಸಾಮಾನ್ಯ ಅಭ್ಯರ್ಥಿಯನ್ನು ಇಟ್ಟುಕೊಂಡು ಗೆದ್ದಿದ್ದೇವೆ. ಸಿಂದಗಿಯಲ್ಲಿ ಹೈ-ಫೈ ಅಭ್ಯರ್ಥಿ ಕಣದಲ್ಲಿ ಇರಲಿಲ್ಲ ಈ ಫಲಿತಾಂಶ ನೋಡಿ ಒಬ್ಬ ವ್ಯಕ್ತಿ ಅಥವಾ ಸರ್ಕಾರದ ಬಗ್ಗೆ ನಿರ್ಧಾರ ಮಾಡುವುದು ಸರಿಯಲ್ಲ ಎಂದರು.

ಭತ್ತ ಬೆಳೆಗಾರರಿಗೆ ಬೆಂಬಲ ಬೆಲೆ ವಿಚಾರದಲ್ಲಿ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಭತ್ತಕ್ಕೆ ಕೇಂದ್ರ ಸರ್ಕಾರ 1940 ರುಪಾಯಿ ಬೆಂಬಲ ಬೆಲೆ ಘೋಷಣೆ ಮಾಡಿದೆ. ತಕ್ಷಣ ಖರೀದಿ ಕೇಂದ್ರ ಆರಂಭಿಸಲು ಕರ್ನಾಟಕ ಸರಕಾರಕ್ಕೆ ಸೂಚಿಸಿದ್ದೇವೆ. ನವಂಬರ್ ,ಡಿಸೆಂಬರ್ ತಿಂಗಳಲ್ಲಿ ಭತ್ತದ ಕೊಯ್ಲು, ಮಾರಾಟ ಮುಗಿದುಹೋಗುತ್ತೆ ಆದ್ದರಿಂದ ಖರೀದಿ ಕೇಂದ್ರ ಆರಂಭಿಸಲು ಇದು ಸಕಾಲ. ತಕ್ಷಣವೇ ಕ್ಯಾಬಿನೆಟ್ ನಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಮತ್ತು ಕೃಷಿ ಸಚಿವರು ಭರವಸೆ ನೀಡಿದ್ದಾರೆ ಎಂದರು.