ಪುಣ್ಯಕೋಟಿ ಯೋಜನೆಯ ರಾಯಭಾರಿಯಾಗಿ ಕಿಚ್ಚ ಸುದೀಪ್ ನೇಮಕ…

45
firstsuddi

ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಈ ಶುಭದಿನದಂದು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪುಣ್ಯಕೋಟಿ ಯೋಜನೆಯ ರಾಯಭಾರಿಯಾಗಿ ಕಿಚ್ಚ ಸುದೀಪ್ ಅವರನ್ನು ನೇಮಕ ಮಾಡಲಾಗಿದೆ.

ಪುಣ್ಯಕೋಟಿ ಯೋಜನೆಯ ರಾಯಭಾರಿಯಾಗಿ ಸುದೀಪ್ ಅವರನ್ನು ನೇಮಕ ಮಾಡಲಾಗಿದೆ ಎಂದು ಪಶು ಸಂಗೋಪನಾ ಸಚಿವ ಪ್ರಭು ಬಿ.ಚವ್ಹಾಣ್ ತಿಳಿಸಿದ್ದಾರೆ. ಈ ಕುರಿತು ಕಿಚ್ಚ ಸುದೀಪ್ ಅವರಿಗೆ ಪತ್ರ ಬರೆದಿರುವ ಪ್ರಭು ಚವ್ಹಾಣ್, ಪಶು ಸಂಗೋಪನೆ ಇಲಾಖೆಯು ಜಾನುವಾರುಗಳ ರಕ್ಷಣೆಗಾಗಿ ಕೈಗೊಂಡಿರುವ ಕಾರ್ಯಕ್ರಮಗಳನ್ನು ಪ್ರಚುರಪಡಿಸಿ, ಹೈನುಗಾರಿಕೆಗೆ ಉತ್ತೇಜನ ನೀಡಿ, ಜಾನುವಾರುಗಳ ಸಂರಕ್ಷಣೆ, ಪಾಲನೆ, ಪೋಷಣೆ ಮಾಡುತ್ತಿರುವ ಸರ್ಕಾರದೊಂದಿಗೆ ಕೈಜೋಡಿಸಿ, ಸಾರ್ವಜನಿಕರಲ್ಲಿ ಸ್ಫೂರ್ತಿ ತುಂಬಲು ತಮ್ಮನ್ನು ತಮ್ಮ ಜನ್ಮದಿನದ ಈ ಶುಭಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಪುಣ್ಯಕೋಟಿ ದತ್ತು ಯೋಜನೆ ಯ ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದೆ ಎಂದು ತಿಳಿಸಲು ಹರ್ಷಿಸುತ್ತೇನೆ.

ತಾವು ಈ ಸತ್ಕಾರ್ಯದಲ್ಲಿ ಭಾಗಿಯಾಗಿ ಗೋ ಸಂಪತ್ತಿನ ಸಂರಕ್ಷಣೆಗೆ ಸರ್ಕಾರ ತೊಟ್ಟಿರುವ ಸಂಕಲ್ಪಕ್ಕೆ ಕೈ ಜೋಡಿಸಿ, ಗೋಮಾತಾ ರಕ್ಷಣೆಯಲ್ಲಿ ನಾವೆಲ್ಲರೂ ಭಾಗಿಯಾಗೋಣ ಎಂದು ಇಚ್ಛಿಸುತ್ತೇನೆ ಎಂದು ಪತ್ರ ಬರೆದಿದ್ದಾರೆ. ಸುದೀಪ್ ಅವರು ಯಾವುದೇ ಸಂಭಾವನೆ ಇಲ್ಲದೆ ಈ ಕೆಲಸವನ್ನು ನಿರ್ವಹಿಸುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪ್ರಭು ಚವ್ಹಾಣ್ ಮಾಹಿತಿ ಹಂಚಿಕೊಂಡಿದ್ದಾರೆ.