ಪೈಶಾಚಿಕ ಕೃತ್ಯ – ಹೆತ್ತ ತಾಯಿ ಮೇಲೆಯೇ ಅತ್ಯಾಚಾರ ಎಸಗಿದ ಪಾಪಿ ಮಗ!

70
firstsuddi

ದಕ್ಷಿಣ ಕನ್ನಡ : ಹೆತ್ತ ತಾಯಿಯ ಮೇಲೆಯೇ ಮಗ ಅತ್ಯಾಚಾರ ಎಸಗಿದ ಪೈಶಾಚಿಕ ಘಟನೆಯೊಂದು ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ಕುರಿಕ್ಕಾರದಲ್ಲಿ ನಡೆದಿದೆ.

ಜನವರಿ 12ರ ತಡರಾತ್ರಿ ಹಾಗೂ ಮರುದಿನ ಬೆಳಗ್ಗೆ ಎರಡು ಬಾರಿ ತಾಯಿಯ ತೀವ್ರ ವಿರೋಧದ ನಡುವೆಯೂ ಅಮಾನುಷವಾಗಿ ಪ್ರಾಣಿಯಂತೆ ಎರಗಿ ಅತ್ಯಾಚಾರ ಎಸಗಿದ್ದಾನೆ. ಇದರಿಂದ 58 ವರ್ಷದ ತಾಯಿ ತೀವ್ರವಾಗಿ ಅಸ್ವಸ್ಥಗೊಂಡಿದ್ದು, ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸಂತ್ರಸ್ತೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಈ ಬಗ್ಗೆ ದೂರು ನೀಡಿದ್ದಾರೆ. ಮಗನ ವಿರುದ್ಧ ಐಪಿಸಿ ಸೆಕ್ಷನ್ 376(2)(ಎನ್) ಮತ್ತು 506 ಸೆಕ್ಷನ್ಗಳ ಅಡಿಯಲ್ಲಿ ದೂರು ದಾಖಲಾಗಿದೆ. ಸದ್ಯ ಆರೋಪಿಯನ್ನು ಸಂಪ್ಯ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ತಾಯಿ ಮತ್ತು ಮಗ ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆ. ಜನವರಿ 12ರಂದು ಎಂದಿನಂತೆ ರಾತ್ರಿ ಊಟ ಮಾಡಿ ಆರೋಪಿಯು ತನ್ನ ಕೋಣೆಯಲ್ಲಿ ಮಲಗಿದ್ದ. 3 ಗಂಟೆ ನಸುಕಿನ ವೇಳೆ ತಾಯಿ ಮಲಗಿದ್ದ ಕೋಣೆಗೆ ತೆರಳಿ ಆರೋಪಿ ಅತ್ಯಾಚಾರ ಎಸಗಿದ್ದಾನೆ. ಈ ಸಂದರ್ಭ ತಾಯಿ ಕಿರುಚಿ, ತೀವ್ರ ವಿರೋಧ ವ್ಯಕ್ತಪಡಿಸಿದ್ದಾಳೆ. ಈ ವೇಳೆ ಆರೋಪಿಯು ತಾಯಿಯ ಬಾಯಿಗೆ ಬಟ್ಟೆ ಒತ್ತಿ, ಬೊಬ್ಬೆ ಹಾಕದಂತೆ ಬೆದರಿಕೆ ಹಾಕಿದ್ದಾನೆ. ಅಲ್ಲದೇ ಅತ್ಯಾಚಾರದ ಬಳಿಕ ಈ ವಿಚಾರವನ್ನು ಯಾರಲ್ಲಾದರೂ ತಿಳಿಸಿದರೆ ಕೊಂದು ಬಿಡುವುದಾಗಿ ಬೆದರಿಸಿದ್ದಾನೆ.

ಜ.13ರಂದು ಬೆಳಗ್ಗೆ ತಾಯಿ ಅಡುಗೆ ಕೋಣೆಯಲ್ಲಿದ್ದ ಸಂದರ್ಭದಲ್ಲಿ ಅಲ್ಲಿಗೆ ಬಂದ ಆರೋಪಿಯು ಬಲವಂತದಿಂದ ಆಕೆಯನ್ನು ಮನೆಯ ಹಾಲ್ ಗೆ ಎಳೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ದೂರು ದಾಖಲಾಗಿದೆ. ಆರೋಪಿಗೆ ಮದುವೆಯಾಗಿದ್ದು, ಸೀಮಂತ ಮುಗಿಸಿರುವ ಪತ್ನಿ ತವರು ಮನೆಯಲ್ಲಿ ವಾಸಿಸುತ್ತಿದ್ದಾಳೆ ಎಂದು ತಿಳಿದು ಬಂದಿದೆ.