ಚಿಕ್ಕಮಗಳೂರು : ಪೋಷಕರು ತಮ್ಮ ಕನಸು, ಆಸೆ, ಆಕಾಂಕ್ಷೆಗಳನ್ನು ಮಕ್ಕಳ ಮೇಲೆ ಬಲವಂತವಾಗಿ ಹೇರಬಾರದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಹೇಳಿದರು.
ನಗರದ ಶ್ರೀ ಗಾಯತ್ರಿದೇವಿ ಕಲ್ಯಾಣ ಮಂಟಪದಲ್ಲಿ ನಿನ್ನೆ ನಡೆದ ಸಮೃದ್ಧಿ ಕಿಡ್ಸ್ ಕ್ರಿಯೇಟಿವಿಟಿ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿ ಮಕ್ಕಳಲ್ಲೂ ಅವರದೇ ಆದ ಕನಸು, ಆಸಕ್ತಿ ಮತ್ತು ಪ್ರತಿಭೆ ಇರುತ್ತವೆ. ಪೋಷಕರು ಮತ್ತು ಶಿಕ್ಷಕರು ನೀನು ಹೀಗೇ ಆಗಬೇಕು ಎಂದು ಒತ್ತಡ ಹೇರುವ ಬದಲು ತಮ್ಮ ಮಕ್ಕಳ ಆಸಕ್ತಿಯನ್ನು ಗುರುತಿಸಿ ಅದಕ್ಕೆ ನೀರೆರೆದು ಪೋಷಿಸಿದರೆ ಅವರ ಕಲಿಕೆ ಸುಗಮವಾಗಿ ಭವಿಷ್ಯ ಉಜ್ವಲವಾಗುತ್ತದೆ ಎಂದು ಕಿವಿಮಾತು ಹೇಳಿದರು.
ಮಕ್ಕಳ ಭವಿಷ್ಯದ ದೃಷ್ಟಿಯಿಂದ ಅವರನ್ನು ಪೋಷಕರು ಮೊಬೈಲ್ ನಿಂದ ದೂರವಿಡಬೇಕು. ಮೊಬೈಲ್ ಚಟವಾಗಿ ಬೆಳೆದರೆ ಮಕ್ಕಳ ಮಾನಸಿಕ ಮತ್ತು ದೈಹಿಕ ಆರೋಗ್ಯ ಹಾಳಾಗುತ್ತದೆ ಎಂದು ಎಚ್ಚರಿಸಿದರು.
ಮೊಬೈಲ್ ಚಟವನ್ನು ಬೆಳೆಸಿಕೊಂಡಿರುವ ಮಕ್ಕಳು ಮತ್ತು ಯುವ ಜನತೆ ಮಾನಸಿಕ ಮತ್ತು ದೈಹಿಕ ರೋಗಕ್ಕೆ ಬಲಿಯಾಗುತ್ತಿದ್ದಾರೆ. ಮಾದಕವಸ್ತು ಮತ್ತು ಮದ್ಯ ವ್ಯಸನ ಮುಕ್ತಿ ಕೇಂದ್ರಗಳ ಹಾಗೆ ಇತ್ತೀಚೆಗೆ ಮೊಬೈಲ್ ಅಡಿಕ್ಷನ್ ಸೆಂಟರ್ ಗಳೂ ತಲೆ ಎತ್ತುತ್ತಿವೆ. ಹಾಗಾಗಿ ನಿಮ್ಮ ಮಕ್ಕಳನ್ನು ಮೊಬೈಲ್ ನಿಂದ ದೂರವಿಡಿ ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲೆಯ ಅಧ್ಯಕ್ಷ ಶಂಕರನಾರಾಯಣ ಭಟ್, ತಮ್ಮ ಸಂಸ್ಥೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಅವರಲ್ಲಿ ಸಂಸ್ಕೃತಿ, ಸಂಸ್ಕಾರವನ್ನೂ ಬೆಳೆಸುತ್ತಿದೆ ಎಂದು ತಿಳಿಸಿದರು.
ಶಾಲೆಯ ಅಭಿವೃದ್ಧಿಗೆ ಕಾರಣರಾದ ಪೋಷಕರಿಗೆ ಧನ್ಯವಾದ ಅರ್ಪಿಸಿದರು. ಪ್ರಾಂಶುಪಾಲೆ ಪೂಜಾ ಶಾಲಾ ವಾರ್ಷಿಕ ವರದಿಯನ್ನು ಮಂಡಿಸಿದರು.
ಗಾಯತ್ರಿ ಮಹಿಳಾ ಮಂಡಳಿಯ ಅಧ್ಯಕ್ಷೆ ಬನಶಂಕರಿ ಎಂ.ಜೋಶಿ, ಶಾಲೆಯ ಖಜಾಂಚಿ ಉಜ್ವಲ್ ಡಿ. ಪಡುಬಿದ್ರಿ, ಕಾರ್ಯದರ್ಶಿ ಆನಂದಕುಮಾರ್ ಶೆಟ್ಟಿ, ಟ್ರಸ್ಟಿಗಳಾದ ಹೆಚ್.ಬಾಲಕೃಷ್ಣರಾವ್, ರಾಜಾರಾಮ್ ಕೋಟೆ, ಶಿಕ್ಷಕರಾದ ಮಮತ, ನಮ್ರತಾ ಪೈ ಉಪಸ್ಥಿತರಿದ್ದರು. ಸಮಾರಂಭದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.










