ಬೆಂಗಳೂರು : ರಾಜ್ಯದಲ್ಲಿ ಹೆಚ್3ಎನ್2 ಆತಂಕ ಹಿನ್ನೆಲೆ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಹೆಚ್3ಎನ್2 ಸೋಂಕು ನಿಯಂತ್ರಣ ಹಾಗೂ ಮುನ್ನೆಚ್ಚರಿಕಾ ಕ್ರಮಗಳ ಕುರಿತು ತಜ್ಞರು, ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ತಾಂತ್ರಿಕ ಸಲಹಾ ಸಭೆ ನಡೆಯಿತು.
ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸುಧಾಕರ್ ಅವರು, ರಾಜ್ಯದಲ್ಲಿ ಹೆಚ್1 ಎನ್ 1- 20 ಕೇಸ್, ಹೆಚ್ 3 ಎನ್ 2 – 26 ಕೇಸ್ ಇದೆ. ಹೆಚ್3ಎನ್2 ಸೋಂಕಿನಿಂದ 15 ವರ್ಷದ ಒಳಗಿನ ಮಕ್ಕಳಿಗೆ ಹೆಚ್ಚು ಅಪಾಯವಿದೆ. 60 ವರ್ಷ ಮೆಲ್ಪಟ್ಟವರಿಗೂ ಇದು ಸುಲಭವಾಗಿ ಹರಡುತ್ತೆ. ಗರ್ಭಿಣಿಯರು ಹೆಚ್ಚು ಎಚ್ಚರಿಕೆ ವಹಿಸಬೇಕು. ರಾಜ್ಯದ ಜನರು ಹೆಚ್ಚು ಜಾಗೃತವಾಗಿರಬೇಕು. ಸೀನುವಾಗ, ಕೆಮ್ಮುವಾಗ ಮುನ್ನೆಚ್ಚರಿಕೆ ವಹಿಸಬೇಕು ಎಂದು ಹೇಳಿದ್ದಾರೆ.
ಮಾಸ್ಕ್ ಧರಿಸೋದು ಇತ್ತೀಚೆಗೆ ಕಡಿಮೆಯಾಗಿದೆ. ಆಸ್ಪತ್ರೆಯ ಸಿಬ್ಬಂದಿ ಕೂಡ ಧರಿಸುತ್ತಿಲ್ಲ. ಎಲ್ಲಾ ಆರೋಗ್ಯ ಸಿಬ್ಬಂದಿ ಮಾಸ್ಕ್ ಅನ್ನು ಕಡ್ಡಾಯವಾಗಿ ಧರಿಸಬೇಕು. ಅಲ್ಲದೆ ಇನ್ ಫ್ಲ್ಯೂಯೆಂಜಾಗೆ ವ್ಯಾಕ್ಸಿನ್ ತೆಗೆದುಕೊಳ್ಳುವಂತೆ ಆರೋಗ್ಯ ಸಿಬ್ಬಂದಿಗೆ ಸಚಿವರು ಸೂಚಿಸಿದರು.
ಜನರು ವೈಯಕ್ತಿಕವಾಗಿ ಚಿಕಿತ್ಸೆ ತೆಗೆದುಕೊಳ್ಳುವುದು ಸೂಕ್ತವಲ್ಲ. ಬೇಸಿಗೆಗೆ ನಾವು ಕಾಲಿಟ್ಟಿದ್ದೇವೆ. ಬಿಸಿಗಾಳಿ ಇದ್ದು, ಬಿಸಿಲಿನಲ್ಲಿ ಅನಗತ್ಯವಾಗಿ ಓಡಾಟ ಮಾಡುವುದು ಜನರು ನಿಲ್ಲಿಸಬೇಕು. ಬೆಳಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆ ವರೆಗೆ ಬಿಸಿಲಿಗೆ ಹೋಗೋದು ಕಡಿಮೆ ಮಾಡಬೇಕು. ಇಲ್ಲದಿದ್ದರೆ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದೆ. ಹೆಚ್ಚು ನೀರು ಕುಡಿಯಿರಿ. ಮಜ್ಜಿಗೆ ಎಳನೀರು ಸೇವಿಸಿ ಎಂದು ಸಚಿವರು ಸಲಹೆ ನೀಡಿದರು.










