ಮಂಡ್ಯ : ನಾನೇನು ತಪ್ಪು ಮಾಡಿದ್ದೆ ಎಂದು ನನ್ನನ್ನು ಕೈಬಿಟ್ಟಿರಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಮತ್ತೆ ಕಣ್ಣೀರು ಹಾಕಿದ್ದಾರೆ. ಜಿಲ್ಲೆಯ ಕೆ.ಆರ್. ಪೇಟೆಯಲ್ಲಿ ನಡೆದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಜಿಲ್ಲೆಯ ಜನರನ್ನು ನಂಬಿದ್ದೆ. ಆದರೆ ನಾನೇನು ತಪ್ಪು ಮಾಡಿದ್ದೆ. ನನ್ನ ಮಗನನ್ನು ಚುನಾವಣೆಗೆ ನಿಲ್ಲಿಸಬೇಕೆಂದು ನಾನು ಬಯಸಿರಲಿಲ್ಲ. ನೀವೇ ಒತ್ತಾಯ ಮಾಡಿ ಚುನಾವಣೆಗೆ ನಿಲ್ಲುವಂತೆ ಮಾಡಿದಿರಿ. ಜಿಲ್ಲೆಯ ಜನರನ್ನು ಸ್ಪರ್ಧಿಸಲು ಅನುಮತಿ ನೀಡಿದೆ. ಆದರೆ ನೀವೇ ನನ್ನ ಕೈ ಬಿಟ್ಟಿರಿ ಎಂದು ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರ ಸೋಲನ್ನು ನೆನಪಿಸಿಕೊಂಡು ಕಣ್ಣೀರು ಹಾಕಿದ್ದಾರೆ. ಇದೇ ವೇಳೆ ಅನರ್ಹ ಶಾಸಕ, ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದು, 2014 ಹಾಗೂ 2018ರಲ್ಲಿ ದೇವೇಗೌಡ ಅವರ ವಿರೋಧವನ್ನು ಕಟ್ಟಿಕೊಂಡು ನಾರಾಯಣ ಗೌಡ ಅವರಿಗೆ ಟಿಕೆಟ್ ಕೊಟ್ಟೆ. ಆದರೆ ಅವರು ನನ್ನ ನಂಬಿಕೆ ದ್ರೋಹ ಬಗೆದಿದ್ದಾನೆ. ಫೆಬ್ರವರಿ 18ರಂದು ನಾನು ಬೆಂಗಳೂರಿನಲ್ಲಿ ಕುಳಿತುಕೊಂಡು ಬಜೆಟ್ನಲ್ಲಿ ಮಂಡ್ಯ ಜಿಲ್ಲೆಗೆ ಘೋಷಿಸಬೇಕಾದ ಕಾರ್ಯಕ್ರಮದ ಬಗ್ಗೆ ಯೋಚಿಸುತ್ತಿದ್ದರೆ ಈ ಪುಣ್ಯಾತ್ಮ ಬಾಂಬೆ ಆಸ್ಪತ್ರೆಯಲ್ಲಿ ಲಾಕ್ ಆಗಿದ್ದ. ಕುಮಾರಸ್ವಾಮಿ ಅವರು ಕ್ಷೇತ್ರದ ಅಭಿವೃದ್ದಿಗೆ ಹಣವನ್ನು ನೀಡುತ್ತಿಲ್ಲ. ಯಡಿಯೂರಪ್ಪ ಅವರು ಉದಾರತೆಯಿಂದ ಹಣವನ್ನು ನೀಡುತ್ತಿದ್ದಾರೆ ಎಂದು ಪ್ರಚಾರ ಮಾಡಿಕೊಂಡು ಬರುತ್ತಿದ್ದಾರೆ. ಇವೆಲ್ಲವನ್ನು ದೇವರೇ ನೋಡಿಕೊಳ್ಳಲಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.










